ಬೆಂಗಳೂರು: ತಾವು ಸೋತರೂ ಪಕ್ಷಕ್ಕೆ ಲಾಭ ಮಾಡಿಕೊಟ್ಟರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿ, ಉತ್ತಮ ಸ್ಥಾನಮಾನ ಕಲ್ಪಿಸಲು ‘ಕೈ’ ಪಡೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 30 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಶೆಟ್ಟರ್ ಬಿಜೆಪಿ ಕಟ್ಟಿದವರಲ್ಲಿ ಒಬ್ಬರು. ಕೊನೇ ಘಳಿಗೆಯಲ್ಲಿ ಪಕ್ಷ ಗೌರವದಿಂದ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ಗೆ ಜಿಗಿದಿದ್ದರು.
ಆದರೆ, ಸೆಂಟ್ರಲ್ ಕ್ಷೇತ್ರದಲ್ಲಿ ಸೋತರೂ ಅವರು ಕಾಂಗ್ರೆಸ್ ಸೇರಿದ್ದರ ಲಾಭ ಪಕ್ಷಕ್ಕಾಗಿದೆ. ಸುತ್ತಮುತ್ತಲಿನ ನಾಲ್ಕಾರು ಜಿಲ್ಲೆಗಳಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನ ಬರಲು ಇವರ ಆಗಮನವೂ ಕಾರಣವಾಗಿದೆ. ಕಾಂಗ್ರೆಸ್ಸಿನೊಂದಿಗೆ ಇರದ ಲಿಂಗಾಯತ ಸಮುದಾಯ ಈ ಸಲ ಪಕ್ಷಕ್ಕೆ ಬೆಂಬಲ ನೀಡಿದೆ ಎಂದರೆ ಅದಕ್ಕೆ ಶೆಟ್ಟರ್ ಕೂಡ ಕಾರಣ ಎನ್ನುವುದನ್ನು ಕಾಂಗ್ರೆಸ್ ಮನಗಂಡಿದೆ.
ಆದಕಾರಣ ಶೆಟ್ಟರ್ ಸೋತಿದ್ದಾರೆ ಎಂದು ಯಾವುದೇ ಸ್ಥಾನಮಾನ ನೀಡದಿದ್ದರೆ ಮುಂದೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳಬಹುದು. ಸದ್ಯ ಅವರನ್ನು ಎಂಎಲ್ಸಿ ಮಾಡಿ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಿದರೆ ಪಕ್ಷಕ್ಕೂ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯಕ್ಕೆ ಪಕ್ಷದ ಮುಖಂಡರು ಬಂದಿದ್ದಾರೆನ್ನಲಾಗಿದೆ. ಇದರಿಂದ ಈ ಭಾಗದಲ್ಲಿ ಕಾಂಗ್ರೆಸ್ಸಿಗೆ ಬಲ ಬರಲಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ಸಿಗರದು.