ಹಿಂದಿನ ಚಿತ್ರರಂಗಕ್ಕೆ ಹೋಲಿಸಿದರೆ ಇಂದಿನ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಟೆಕ್ನಾಲಜಿ ಒಂದು ಕಡೆಯಾದರೆ ಮತ್ತೊಂದು ಕಡೆ ಕಥೆಯೇ ಇಲ್ಲದೆ ಸಿನಿಮಾಗಳು ನಡೆಯುತ್ತಿದೆ. ಇಲ್ಲಿ ಕೇವಲ ಹಣಕ್ಕಷ್ಟೇ ಬೆಲೆ. ಕಥೆ ಇಲ್ಲದೆ ಇದ್ರು ಹಣವಿದ್ರೆ ಸಿನಿಮಾ ನಡೆಯುತ್ತೆ ಎಂದು ನಟ ಜಗ್ಗೇಶ್ ಕಣ್ಣೀರಿಟ್ಟಿದ್ದಾರೆ.
‘ನವರಸ ನಾಯಕ’ ಎಂದೇ ಕರೆಸಿಕೊಂಡವರು ನಟ ಜಗ್ಗೇಶ್ ಸುಮಾರು 40ಕ್ಕೂ ಅಧಿಕ ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ತಮ್ಮದೇ ಆದ ಸ್ಥಾನ ಕಂಡುಕೊಂಡಿರುವ ಜಗ್ಗೇಶ್ ಪ್ರಸ್ತುತ ರಾಜ್ಯಸಭಾ ಸದಸ್ಯರು ಆಗಿದ್ದಾರೆ. ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ರಿಯಾಲಿಟಿ ಶೋನಲ್ಲಿ ತೀರ್ಪುಗಾರರೂ ಆಗಿರುವ ಜಗ್ಗೇಶ್ ಇದೀಗ ಈ ಶೋನಲ್ಲಿ ಕನ್ನಡ ಚಿತ್ರರಂಗದ ಈಗಿನ ಸ್ಥಿತಿಗತಿಯನ್ನು ಕಂಡು ಕಣ್ಣೀರು ಹಾಕಿದ್ದಾರೆ.
“ಈಚೆಗೆ 4-5 ವರ್ಷಗಳಿಂದ ಎಲ್ಲವೂ ಡಿಸಾಸ್ಟರ್ ಆಗಿದೆ. ಎಲ್ರೂ ಒಳ್ಳೆಯ ಸಿನಿಮಾಗಳನ್ನೇ ಮಾಡ್ತಾ ಇದ್ದಾರೆ. ಯಾರೂ ಕೆಟ್ಟ ಸಿನಿಮಾ ಮಾಡ್ತಾ ಇಲ್ಲ. ಎಲ್ಲ ರೀತಿಯ ಪ್ರಚಾರ ಮಾಡ್ತಾರೆ. ಆದರೆ ಥಿಯೇಟರ್ಗೆ ಬಂದಾಗ ಸಿನಿಮಾ ನೋಡೋಕೆ ಜನರೇ ಇರೋದಿಲ್ಲ. ಕನ್ನಡಕ್ಕೆ ಮಾತ್ರ ಹಿಂಗೆ ಅಂದ್ರೆ ಅಲ್ಲ, ಎಲ್ಲರಿಗೂ ಆಗ್ತಿದೆ. ಹೀಗಾದರೆ ನಾವು ಹೇಗೆ ಸಿನಿಮಾ ಮಾಡೋದು? ಯಾಕೆ ಥಿಯೇಟರ್ಗೆ ಜನ ಬರ್ತಿಲ್ಲ” ಎಂದು ಭಾವುಕರಾಗಿ ಪ್ರಶ್ನೆ ಮಾಡಿದ್ದಾರೆ ಜಗ್ಗೇಶ್.
“ಅಕ್ಷಯ್ ಕುಮಾರ್ದು ಕೋಟ್ಯಂತರ ರೂಪಾಯಿ ಹಾಕಿ ಪಿಚ್ಚರ್ ಮಾಡಿದ್ದಾರೆ. ಆ ಸಿನಿಮಾ ಕೂಡ ಹೀನಾಯ ಸೋಲು ಕಂಡಿದೆ. ಇಡೀ ಭಾರತದಲ್ಲಿ ಸಿನಿಮಾ ವಾಷ್ಔಟ್ ಆಗಿದೆ. 200 ಕೋಟಿ ರೂಪಾಯಿ ಹಾಕಿ ಯಾರು ಸಿನಿಮಾ ಮಾಡ್ತಾರೋ, ಅದು ಸಿನಿಮಾ ಎನ್ನುವಂತಾಗಿದೆ. ಯಾರು ಒಂದೊಳ್ಳೇ ಕಥೆಯನ್ನಿಟ್ಟುಕೊಂಡು, ಒಂದು ಸಣ್ಣ ಫಿಲ್ಮ್ ಮಾಡ್ತಾರೆ, ಅದು ಸಿನಿಮಾ ಅಲ್ಲ ಅನ್ನೋ ಹಾಗೇ ಆಗಿದೆ” ಎಂದು ಜಗ್ಗೇಶ್ ಹೇಳಿದ್ದಾರೆ.
“ನಮ್ಮ ಅಣ್ಣ-ತಮ್ಮಂದಿರು, ಒಡಹುಟ್ಟಿದವರು, ‘ಇದು ದರಿದ್ರ ಪಿಚ್ಚರ್, ಕೆಟ್ಟ ಪಿಚ್ಚರ್’ ಅಂತ ಹೇಳಿ, ತಮ್ಮ ಶ್ರಮ ಹಾಕಿ, ಇನ್ನೊಬ್ಬರ ಲೈಫ್ನ ಹಾಳು ಮಾಡ್ತಾರೆ. ಎಲ್ಲರೂ ಚೆನ್ನಾಗಿರಲಿ ಅಷ್ಟೇ, ನಾವು ಯಾರಿಗೂ ಕೆಟ್ಟದ್ದು ಬಯಸೋದು ಬೇಡ. ನೀವು ಬೇಜಾರಾಗಿ, ಯೂಟ್ಯೂಬ್ನಲ್ಲಿ ಒಂದು ಸೀನ್ ನೋಡಿ ಖುಷಿ ಪಡ್ತೀರಿ ಅಂದ್ರೆ, ಅದು ನಮ್ಮ ಸಿನಿಮಾ. ನಾನು ಸ್ವಲ್ಪ ಭಾವುಕನಾದೆ. ಯಾಕೆಂದರೆ, ನನ್ನ ಅಣು ರೇಣು ತೃಣಕಾಷ್ಟದಲ್ಲೂ ಸಿನಿಮಾವೇ ತುಂಬಿದೆ. ನನ್ನ ಬದುಕು, ನನ್ನ ಕನಸು, ನನ್ನ ಬಟ್ಟೆ ಎಲ್ಲವನ್ನೂ ಸಿನಿಮಾ ಕೊಟ್ಟಿದೆ. ಹಾಗಾಗಿ, ಸಿನಿಮಾವನ್ನು ನಾನು ತಾಯಿಯಂತೆ ಪ್ರೀತಿ ಮಾಡುತ್ತೇನೆ” ಎಂದು ಕಣ್ಣೀರಿಟ್ಟಿದ್ದಾರೆ.