ಜೈಲರ್ (Jailer) ಸಿನಿಮಾ ಈಗಲೂ ಬಾಕ್ಸ್ ಆಫೀಸಿನಲ್ಲಿ ಈಗಲೂ ಸದ್ದು ಮಾಡುತ್ತಿದೆ. ಹಲವು ವರ್ಷಗಳ ನಂತರ ರಜನಿ ಇಂಥದ್ದೊಂದು ಗೆಲುವನ್ನು (Success) ತಮ್ಮದಾಗಿಸಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಜೈಲರ್ ಸಿನಿಮಾ ಯಶಸ್ವಿ ಬೆನ್ನಲ್ಲೇ ನಿರ್ಮಾಪಕ ಕಲಾನಿಧಿ ಮಾರನ್ (Kalanidhi Maran), ನಟ ರಜನಿಕಾಂತ್ (Rajinikanth) ಅವರಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. ಈ ಸಿನಿಮಾಗಾಗಿ ರಜನಿ 250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದ್ದು,
ಮೊದಲ ಕಂತಾಗಿ 150 ಕೋಟಿ ರೂಪಾಯಿ ಸಂದಾಯವಾಗಿತ್ತು. ಎರಡನೇ ಕಂತು ನೂರು ಕೋಟಿ ರೂಪಾಯಿ ಮತ್ತು ಬಿಎಂಡಬ್ಲೂ ಎಕ್ಸ್ 7 ದುಬಾರಿ ಕಾರನ್ನು (Car) ಉಡುಗೊರೆಯಾಗಿ ನೀಡಲಾಗಿದೆ. ಈ ಕಾರಿನ ಬೆಲೆ 1.50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ರಜನಿಕಾಂತ್ ಮೇನಿಯಾ ನಿಲ್ಲುತ್ತಿಲ್ಲ. ಒಂದಲ್ಲ ಎರಡಲ್ಲ. ಭರ್ತಿ ಹದಿನಾರು ದಿನಗಳು ಮುಗಿದಿದೆ. ಆದರೂ ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ನೋಡಿದವರೇ ಮತ್ತೆ ಮತ್ತೆ ನೋಡುತ್ತಿದ್ದಾರೆ.
ರಜನಿ ಯುಗ ಮುಗಿಯಿತು ಎಂದವರಿಗೆ ಕಪಾಳಕ್ಕೆ ಬಾರಿಸುವಂಥ ಉತ್ತರ ಕೊಟ್ಟಿದೆ ಜೈಲರ್. ವಿಶ್ವಾದ್ಯಂತ ಇಲ್ಲಿವರೆಗೆ 600 ಕೋಟಿ ರೂಪಾಯಿ ಗಳಿಸಿದೆ. ಹಾಗಿದ್ದರೆ ಕರ್ನಾಟಕದಲ್ಲಿ(Karnataka) ಎಷ್ಟು ಕೋಟಿ? ಉಸಿರು ಬಿಗಿ ಹಿಡಿಯಿರಿ. ಅನಾಮತ್ತು ಅರವತ್ತು ಕೋಟಿಗೂ ಅಧಿಕ ಖಜಾನೆಗೆ ಸೇರಿಸಿದೆ. ದಟ್ ಈಸ್ ತಲೈವಾ ತಾಕತ್ತು.
ಮೊದಲ ದಿನ ಒಟ್ಟು 500 ಪ್ರದರ್ಶನ ಕಂಡಿತ್ತು ಜೈಲರ್. ಮೊದಲ ವಾರದ ನಂತರ ಪ್ರದರ್ಶನ ಸಂಖ್ಯೆ ಕಮ್ಮಿ ಆಗಬಹುದು. ಹೀಗಂತ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಐದು ನೂರರಲ್ಲಿ ಒಂದೇ ಒಂದು ಪ್ರದರ್ಶನ ಕಮ್ಮಿಯಾಗಿಲ್ಲ. ಜನರು ಸಿನಿಮಾ ನೋಡುವುದನ್ನು ನಿಲ್ಲಿಸುತ್ತಿಲ್ಲ. ರಜನಿ ಅಷ್ಟೊಂದು ಮೋಡಿ ಮಾಡಿದ್ದಾರೆ. ಏನಾದರಾಗಲಿ. ಹಳೇ ರಜನಿಕಾಂತ್ ಮತ್ತೆ ಸಿಕ್ಕಿದ್ದಾರೆ. ಫ್ಯಾನ್ಸ್ ಕೇಕೆ ಹಾಕುತ್ತಿದ್ದಾರೆ. ನಿರ್ದೇಶಕ ನೆಲ್ಸನ್ ನಿರ್ದೇಶನಕ್ಕೆ ಭೇಷ್ ಎಂದಿದ್ದಾರೆ.