ಬೆಂಗಳೂರು; ನಮ್ಮ ದೇಶ ನಾಲ್ಕು ಧರ್ಮಗಳ ಹುಟ್ಟನ್ನು ಕಂಡಿದೆ. ಹಿಂದು, ಬೌದ್ದ. ಜೈನ ಹಾಗೂ ಸಿಖ್ ಧರ್ಮಗಳು ಹುಟ್ಟಿದ್ದು ನಮ್ಮ ದೇಶದಲ್ಲಿಯೇ. ವಿಶ್ವಕ್ಕೆ ಈ ನಾಲ್ಕೂ ಧರ್ಮಗಳು ವಿಶೇಷ ಸಂದೇಶ ನೀಡುತ್ತಿವೆ. ಜೈನ ಧರ್ಮ ನೀಡಿರುವ ಶಾಂತಿಯ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಗೃಹ ಸಚಿವರಾದ ಮಾನ್ಯ ಡಾ. ಜಿ. ಪರಮೇಶ್ವರ ಅಭಿಪ್ರಾಯ ವ್ಯಕ್ತ ಪಡಿಸಿದರು. ಇಂದು ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ʻಚಾವುಂಡರಾಯʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,
ಧರ್ಮದ ಕುರಿತ ಅಧ್ಯಯನ ನಮ್ಮಲ್ಲಿ ಕೇವಲ ಅಕಾಡಮಿಕ್ ನೆಲೆಯಲ್ಲಿ ನಡೆಯುತ್ತಿದೆಯೇ ಹೊರತು ಅದರ ಅಂತ:ಸತ್ವ ಹಿಡಿಯುವ ಕೆಲಸವಾಗುತ್ತಿಲ್ಲ, ಪ್ರೊ.ಕೆ.ಇ.ರಾಧಾಕೃಷ್ಣ ಅವರು ಇಂತಹ ಮಹತ್ವದ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಮೆಚ್ಚಿಗೆ ಸೂಚಿಸಿದರು. ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿಕೊಂಡು ಪ್ರಪಂಚಕ್ಕೆ ಶಾಂತಿಯ ಸಂದೇಶವನ್ನು ನೀಡುತ್ತ ಬಂದಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಯೋಗ್ಯರನ್ನು ಹುಡುಕಿ ಅವರನ್ನು ಗೌರವಿಸುವ ಕಾರ್ಯ ಮಾಡುತ್ತ ಬಂದಿರುವ ಪರಿಷತ್ತಿನ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು.