ಬೆಂಗಳೂರು ;- ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಶಾಸಕರಾದ ಡಾ. ಟಿ. ಎ. ಶರವಣ ಅವರು ಒತ್ತಾಯಿಸಿದ್ದಾರೆ.
ವಿಧಾನಮಂಡಲದ ಅಧಿವೇಶನದಲ್ಲಿ ಇಂದು ವಿಷಯ ಪ್ರಸ್ತಾಪಿಸಿ ಬೆಳಗಾವಿ ಜಿಲ್ಲೆಯ ಜೈನಮುನಿ ಕಾಮಕುಮಾರನಂದಿ ಮಹಾರಾಜ ಅವರ ಪಾರ್ಥಿವ ಶರೀರವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಎಸೆಯಲಾಗಿತ್ತು. ಈ ಹೃದಯ ವಿದ್ರಾವಕ ಘಟನೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ವಿಧಾನಮಂಡಲದ ಅಧಿವೇಶನದಲ್ಲಿ ಸಚಿವರಾದ ಎಚ್.ಕೆ ಪಾಟೀಲ್ ಅವರಿಗೆ ಮನವಿ ಮಾಡಿದರು.
ಇನ್ನೂ ಗೌರವಯುತ ಸ್ಥಾನದಲ್ಲಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪ್ರಕರಣದ ಬಗ್ಗೆ ನಿರ್ಲಕ್ಷದ ಹೇಳಿಕೆ ನೀಡಿ ಪ್ರಕರಣದ ದಿಕ್ಕು ತಪ್ಪಿಸಬಾರದು, ಈ ರೀತಿಯ ಹೇಳಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಕೈ ಕಟ್ಟಿದಂತಾಗುತ್ತದೆ ಎಂದು ತಿಳಿಸಿದರು.
ಜೈನ ಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೆ ನಿಷ್ಪಕ್ಷಪಾತವಾದ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಈ ವೇಳೆ ಟಿಎ ಶರವಣ ಅವರು ಒತ್ತಾಯಿಸಿದರು.
ಇನ್ನೂ ಸಂಚಲನ ಮೂಡಿಸಿದ್ದ ಬೆಳಗಾವಿ ಜೈನಮುನಿಯ ನಾಪತ್ತೆ ಪ್ರಕರಣ, ಅವರ ಪಾರ್ಥಿವ ಶರೀರದ 9 ಭಾಗಗಳ ಪತ್ತೆಯೊಂದಿಗೆ ದುರಂತವಾಗಿ ಕೊನೆಯಾಗಿದೆ. ಬೆಳಗಾವಿ ಜಿಲ್ಲೆಯ ಜೈನಮುನಿ ಕಾಮಕುಮಾರನಂದಿ ಮಹಾರಾಜ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಬಳಿಕ ಅವರ ಮೃತದೇಹದ 9 ಭಾಗಗಳು 400 ಅಡಿ ಆಳದ ಕೊಳವೆ ಬಾವಿಯಲ್ಲಿ ಪತ್ತೆಯಾಗಿತ್ತು. ಬಳಿಕ ಸಾವಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಅವರ ಆಪ್ತರಿಂದಲೇ ಹತ್ಯೆಗೀಡಾಗಿರುವುದು ತಿಳಿದು ಬಂದಿದೆ.