ಶ್ರೀನಗರ: ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. 6 ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ ಪೀರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಶ್ರೀನಗರ, ಬುದ್ಗಾಮ್, ರಾಜೌರಿ, ಪೂಂಚ್, ಗಂದರ್ಬಾಲ್ ಮತ್ತು ರಿಯಾಸಿ ಸೇರಿದಂತೆ ಒಟ್ಟು 26 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 25.78 ಲಕ್ಷ ಮತದಾರರು, 239 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ಒಟ್ಟು 3,502 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಇವುಗಳಲ್ಲಿ 1,056 ಮತಗಟ್ಟೆಗಳು ನಗರ ಪ್ರದೇಶದಲ್ಲಿ ಮತ್ತು 2,446 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಪಾರದರ್ಶಕ ಚುನಾವಣೆಗಾಗಿ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಜೆಪಿ (BJP) ಜಮ್ಮು ಮತ್ತು ಕಾಶ್ಮೀರ ಮುಖ್ಯಸ್ಥ ರವೀಂದರ್ ರೈನಾ, ಪ್ರದೇಶ ಕಾಂಗ್ರೆಸ್ (Congress) ಸಮಿತಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ, ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಮೊದಲ ಹಂತ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ 18ರಂದು ಶಾಂತಿಯುತವಾಗಿ ನಡೆದಿದ್ದು. ಅಕ್ಟೋಬರ್ 01ರಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ.