ಬೆಂಗಳೂರು:- ಜನಾರ್ದನ ರೆಡ್ಡಿಯನ್ನು ಬಿಜೆಪಿಗೆ ಮರು ಸೇರ್ಪಡೆಗೊಳಿಸುವಂತೆ ಅಮಿತ್ ಶಾರನ್ನು ಒತ್ತಾಯಿಸಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಅಮಿತ್ ಶಾ ನನ್ನ ಅಭಿಪ್ರಾಯ ಕೇಳಿದ್ದರು. ರೆಡ್ಡಿ ಅವರಿಗೆ ಕ್ಷೇತ್ರದಲ್ಲಿ ವರ್ಚಸ್ಸು ಇದೆ, ಅವರನ್ನು ಪಕ್ಷಕ್ಕೆ ಮರಳಿ ಕರೆತಂದರೆ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಲಾಭವಾಗಲಿದೆ ಎಂದು ಹೇಳಿದ್ದೇನೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಳಿಯೂ ಈ ವಿಚಾರವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಮತ್ತು ನನ್ನ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರು ಪಕ್ಷಕ್ಕೆ ಬಂದರೆ ನಾವು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಆತ್ಮಸಾಕ್ಷಿಯ ಮತ ಹಾಕಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಮುಲು, ಅದು ಅವರ ಪಕ್ಷದ ನಿರ್ಧಾರ ಮತ್ತು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
ಇನ್ನೂ ಜನಾರ್ದನ ರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಸಮಸ್ಯೆ ಇರಲಿಲ್ಲ. ಆದರೆ, ಅವರು ಹೊಸ ಪಕ್ಷ ಕಟ್ಟಿದ್ದರಿಂದ ರಾಜಕೀಯವಾಗಿ ವೈಮನಸ್ಸು ಉಂಟಾಗಿತ್ತು. ಶ್ರೀರಾಮುಲು ಮೂಲಕ ಜನಾರ್ದನ ರೆಡ್ಡಿಯವರನ್ನು ಬಿಜೆಪಿಗೆ ಮರಳಿ ಸೇರ್ಪಡೆಗೊಳಿಸುವ ಯತ್ನ ನಡೆಯುತ್ತಿದೆ ಎಂದು ಕಳೆದ ತಿಂಗಳು ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದರು.