ಬೆಳಗಾವಿ: ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ನಾಗೇಶ್ ಅಣ್ಣಪ್ಪ ಮನೋಲ್ಕರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ಜಯ ಸಾಧಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ 99,919 ಪಡೆದರೆ, ನಾಗೇಶ್ ಅಣ್ಣಪ್ಪ ಮನೋಲ್ಕರ್ 45,982 ಪಡೆದಿದ್ದಾರೆ. ಈ ಮೂಲಕ ಲಕ್ಷ್ಮೀ ಹೆಬ್ಬಾಳಕರ್ 53,937 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಗೆಲ್ಲಬಾರದು ಅಂತ ಬಿಜೆಪಿಯ ರಮೇಶ್ ಜಾರಕಿಹೊಳಿ ರಣತಂತ್ರವನ್ನ ಹೆಣೆದಿದ್ದರು. ಆದರೆ, ರಮೇಶ್ ಜಾರಕಹೊಳಿ ಅವರ ರಣತಂತ್ರವನ್ನ ಲಕ್ಷ್ಮೀ ಹೆಬ್ಬಾಳಕರ್ ಬುಡಮೇಲು ಮಾಡುವಲ್ಲಿ ಯಶಸ್ವಿಯಾಗಿದ್ದರು.
ಈ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಅವರು ಸೂಚಿಸಿದವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿತ್ತು. ಆದರೆ, ಮತದಾರ ಪ್ರಭು ಲಕ್ಷ್ಮೀ ಹೆಬ್ಬಾಳಕರ್ ಅವರನ್ನ ಗೆಲ್ಲಿಸಿದ್ದಾರೆ. ಈ ಕ್ಷೇತವನ್ನ ರಮೇಶ್ ಜಾರಕಿಹೊಳಿ ಅವರು ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹೆಬ್ಬಾಳಕರ್ ಜಾರಕಿಹೊಳಿ ರಾಜಕೀಯ ಬದ್ಧ ವೈರಿಗಳಾಗಿದ್ದಾರೆ. ರಮೇಶ್ ಜಾರಕಿಹೊಳಿ ಸೂಚಿಸಿದ ಅಭ್ಯರ್ಥಿ ನಾಗೇಶ್ ಅಣ್ಣಪ್ಪ ಮನೋಲ್ಕರ್ ಸೋಲು ಅನುಭವಿಸಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.