ಹುಬ್ಬಳ್ಳಿ: ಬೆಳಗಾವಿ (Belagavi) ರಾಜಕಾರಣ ಹುಬ್ಬಳ್ಳಿಗೆ (Hubballi) ಶಿಫ್ಟ್ ಆಗಿದ್ದು, ಒಂದೇ ಕಡೆ ಬಿಜೆಪಿ ಅತೃಪ್ತ ನಾಯಕರು ಕಾಣಿಸಿಕೊಂಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಲಕ್ಷ್ಮಣ ಸವದಿ (Laxman Savadi) ಮತ್ತಿತರರ ಭೇಟಿ ಈಗ ತೀವ್ರ ಕುತೂಹಲ ಕೆರಳಿಸಿದೆ.
ಮೊದಲಿಗೆ ಹುಬ್ಬಳ್ಳಿಯ ಕ್ಯೂಬಿಕ್ಸ್ ಹೋಟೆಲ್ನಲ್ಲಿ ಬಿಜೆಪಿ ನಾಯಕರ ಸೀಕ್ರೆಟ್ ಮೀಟಿಂಗ್ ನಡೆಯಿತು. ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಹೇಶ್ ಕುಮಟಳ್ಳಿ ಟಿಕೆಟ್ಗಾಗಿ ಸಾಹುಕಾರ್ ರಮೇಶ ಜಾರಕಿಹೊಳಿ ಪಟ್ಟು ಹಿಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಜಾರಕಿಹೊಳಿ, ಸವದಿ ಮುನಿಸು ಅಂತ್ಯ ಮಾಡುವ ಪ್ರಯತ್ನ ಮಾಡಿದರು
ಇಬ್ಬರ ನಡುವಿನ ಮುನಿಸು ಶಮನಕಾರಿ ಮಾಡುವಲ್ಲಿ ಯಶಸ್ವಿಯಾದ ಕೇಂದ್ರ ಸಚಿವ ಜೋಶಿ, ಮೀಟಿಂಗ್ ಮುಗಿಸಿ ಒಂದೇ ವಾಹನದಲ್ಲಿ ಜೋಶಿ, ಸಾಹುಕಾರ್, ಸವದಿ ವಿಮಾನ ನಿಲ್ದಾಣದಕ್ಕೆ ತೆರಳಿದ್ದು, ಮೂವರು ಒಟ್ಟಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ರಾಜ್ಯದ ಪ್ರಮುಖ ಮೂರು ಪಕ್ಷಗಳಲ್ಲೂ ಬಣ ರಾಜಕಾರಣ ಶುರುವಾಗಿದೆ. ಇದು ಪಕ್ಷಗಳ ಹೈಕಮಾಂಡ್ಗೆ ತಲೆನೋವು ತಂದಿದೆ. ಬಣ ರಾಜಕಾರಣ ಶಮನಕ್ಕೆ ಕಸರತ್ತು ನಡೆಸಲಾಗುತ್ತಿದೆ.