ಸಾಮಾನ್ಯವಾಗಿ ಮಹಿಳೆಯರ ಹೆಸರನ್ನು ಹೇಳುವಾಗ ಅವರ ಗಂಡನ ಹೆಸರು ಸೇರಿಸಿ ಕರೆಯುತ್ತಾರೆ. ಆದರೆ ತನ್ನ ಹೆಸರಿನ ಜೊತೆಗೆ ಪತಿ ಅಮಿತಾಬ್ ಬಚ್ಚನ್ ಹೆಸರು ಸೇರಿಸಿದ್ದರಿಂದ ಗರಂ ಆದ ಜಯಾ ತಕರಾರು ತೆಗೆದಿದ್ದಾರೆ.
ನಟಿ ಹಾಗೂ ರಾಜಕಾರಣಿ ಜಯಾ ಅವರ ಜೊತೆ ಅಮಿತಾಭ್ ಬಚ್ಚನ್ ಅನ್ನೋದು ಕೂಡ ಸೇರಿದೆ. ಇತ್ತೀಚೆಗೆ ಕಲಾಪದ ವೇಳೆ ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ‘ಜಯಾ ಅಮಿತಾಭ್ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ತಕರಾರು ತೆಗೆದ ಜಯಾ ಬಚ್ಚನ್ ‘ನನ್ನ ಹೆಸರಿನ ಜೊತೆ ಪತಿಯ ಹೆಸರನ್ನು ಏಕೆ ಸೇರಿಸಬೇಕಿತ್ತು’ ಎಂದು ಪ್ರಶ್ನೆ ಮಾಡಿದ್ದಾರೆ.
‘ಶ್ರೀಮತಿ ಜಯಾ ಅಮಿತಾಭ್ ಬಚ್ಚನ್ ಜೀ’ ಎಂದು ಹರಿವಂಶ್ ನಾರಾಯಣ್ ಹೇಳಿದ್ದರು. ಇದಕ್ಕೆ ಕೋಪಗೊಂಡ ಜಯಾ ಬಚ್ಚನ್ ‘ಜಯಾ ಬಚ್ಚನ್ ಎಂದು ಕರೆದರೆ ಸಾಕು’ ಎಂದು ಆಕ್ರೋಶ ಹೊರ ಹಾಕಿದರು. ಪಾರ್ಲಿಮೆಂಟ್ ರೆಕಾರ್ಡ್ನಲ್ಲಿ ಜಯಾ ಅಮಿತಾಭ್ ಬಚ್ಚನ್ ಎಂದು ಇರುವುದಾಗಿಯೂ ಅದಕ್ಕಾಗಿಯೇ ತಾವು ಹೀಗೆ ಕರೆದಿದ್ದಾಗಿಯೂ ಹರಿವಂಶ್ ಅವರು ಸ್ಪಷ್ಟನೆ ನೀಡಿದರು. ‘ಇಲ್ಲಿ ನಿಮ್ಮ ಪೂರ್ತಿ ಹೆಸರು ಬರೆದಿದೆ. ಅದನ್ನೇ ನಾನು ಕರೆದೆ’ ಎಂದರು ಹರಿವಂಶ್ ತಿಳಿಸಿದರು.
‘ಇದು ಹೊಸ ಸಂಗತಿ. ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಅವರಿಗೆ ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳಿಲ್ಲ’ ಎಂದು ಜಯಾ ಬೇಸರ ವ್ಯಕ್ತಪಡಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.