ಚಿಕ್ಕಮಗಳೂರು: ಜೆಡಿಎಸ್ (JDS) ಪಕ್ಷದ್ದು ಕಾಂಗ್ರೆಸ್ (Congress) ಜೊತೆ ಅಧಿಕೃತ ಹೊಂದಾಣಿಕೆಯೋ ಅಥವಾ ರಾಜಕೀಯ ವ್ಯಭಿಚಾರವೋ ಎಂದು ಶಾಸಕ ಹಾಗೂ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ತಾಲೂಕಿನಲ್ಲಿ ಅಧಿಕೃತ ಜೆಡಿಎಸ್ ಅಭ್ಯರ್ಥಿ ಇದ್ದರೂ ಕೂಡ ಅವರನ್ನು ಬಿಟ್ಟು ಕಾಂಗ್ರೆಸ್ಗೆ ಮತ ಹಾಕಿ ಎಂದು ಹೇಳುತ್ತಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರ (S.L.Bhojegowda) ವಿರುದ್ಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮದು ಚುನಾವಣಾ ಪೂರ್ವ ಮೈತ್ರಿಯಾದರೆ ಘೋಷಣೆ ಮಾಡಿ. ಹಾಗಾದರೆ, ಜೆಡಿಎಸ್ ಅಧಿಕೃತ ಅಭ್ಯರ್ಥಿ ತಿಮ್ಮಶೆಟ್ಟಿ ಮನೆಯನ್ನು ಏಕೆ ಹಾಳು ಮಾಡುತ್ತೀರಾ? ಆತ ಫ್ಲೆಕ್ಸ್ ಹಾಕೋಕೆ ಅಷ್ಟೆ ಸೀಮಿತನಾ? ಇದೇ ರೀತಿ ಮಾಡಿ ಕಳೆದ ಬಾರಿ ಹರೀಶನ ಮನೆ ಹಾಳು ಮಾಡಿದ್ದೀರಾ. ಭೋಜೇಗೌಡರು ಈ ಬಾರಿ ತಿಮ್ಮಶೆಟ್ಟಿ ಮನೆ ಹಾಳು ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಬ್ಬರ ಮನೆಹಾಳು ಮಾಡುವ ರಾಜಕಾರಣ ಎಷ್ಟು ದಿನ ನಡೆಯುತ್ತದೆ? ಬೇರೆಯವರ ಮನೆ ಹಾಳು ಮಾಡಿದರೆ ಒಂದು ದಿನ ಅದು ನಮ್ಮ ಮನೆಯನ್ನು ಹಾಳು ಮಾಡುತ್ತದೆ ಎಂಬ ಅರಿವಿರಬೇಕು ಎಂದು ಕಿಡಿಕಾರಿದ್ದಾರೆ.
ತಾಲೂಕಿನಲ್ಲಿ ಸಿ.ಟಿ.ರವಿಯನ್ನು ಸೋಲಿಸಲು ಎಸ್ಡಿಪಿಐ, ಪಿಎಫ್ಐ, ಸಿಪಿಐ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಸಿ.ಟಿ.ರವಿ ಬಾಲ ಕತ್ತರಿಸಬೇಕು. ಸಿದ್ದರಾಮಯ್ಯರಿಗೆ ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದಾರೆ. ಹಾಲುಮತದ ಕುರುಬರು ಅವರಿಗೆ ಮತ ಹಾಕಬೇಡಿ ಎಂದು ಹೇಳಿದ್ದ ಭೋಜೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಲು ಮತದ ಸಮಾಜ ಹಾಲಿನಂತ ಮನಸ್ಸು ಇರುವವರು. ಹುಳಿ ಹಿಂಡುವ ರಾಜಕಾರಣಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ. ಕಳೆದ ಬಾರಿಯೂ ಕುರುಬರು ಹೆಚ್ಚಿರುವ ಊರುಗಳಲ್ಲಿ ನನಗೆ ಹೆಚ್ಚಿನ ಲೀಡ್ ಬಂದಿತ್ತು. ಈ ಬಾರಿಯೂ ನನಗೇ ಹೆಚ್ಚು ಲೀಡ್ ಬರೋದು ಎಂದು ಭವಿಷ್ಯ ನುಡಿದಿದ್ದಾರೆ.
ಬಸವರಾಜ ಬೊಮ್ಮಾಯಿ (Basavarj Bommai) ಅವರೇ ನಮ್ಮ ಮುಖ್ಯಮಂತ್ರಿಗಳು. ಬೊಮ್ಮಾಯಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿರುವುದು. ಸಿ.ಟಿ.ರವಿ ಸಿಎಂ ಆಗಬೇಕು ಎಂಬುದು ಜನರ ಅಪೇಕ್ಷೆ. ಅದು ಪಕ್ಷದ ನಿರ್ಣಯ ಅಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದ್ದನ್ನು ಮಾಡುತ್ತೇನೆ. ಆದರೆ ಸಿಎಂ ನನ್ನ ಅಪೇಕ್ಷೆ ಅಲ್ಲ. ಅದು ಜನರ ಅಪೇಕ್ಷೆ. ಕಾಲ ಈಗ ನನ್ನದಲ್ಲ. ನನ್ನ ಕಾಲ ಒಂದಲ್ಲ ಒಂದು ದಿನ ಬರಬಹುದು ಎಂದರು.