ಬೆಂಗಳೂರು:- ಮೂಡ ಹಗರಣದ ಕುರಿತು ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆ ವಿಧಾನಸಭಾ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಅಹೋರಾತ್ರಿ ಧರಣಿ ನಡೆಸಿದೆ.
ಸದನದ ಬಾವಿಯೊಳಗೇ ಹಾಡು, ಭಜನೆಯ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಸ್ವಂತ ಖರ್ಚಿನಲ್ಲಿಯೇ ಊಟ ತರಿಸಿಕೊಂಡು ಊಟ ಮಾಡಿದರು.
ಬಳಿಕ ಸೋಫಾ, ನೆಲದ ಮೇಲೆ ಮಲಗಿದರು.
ವಿಧಾನಸೌಧದಲ್ಲಿ ಸ್ಪೀಕರ್ ಊಟೋಪಚಾರವನ್ನು ತಿರಸ್ಕರಿಸಿದ ಪ್ರತಿಪಕ್ಷ ನಾಯಕರು, ಸ್ವಂತ ಖರ್ಚಿನಲ್ಲೇ ವಿಧಾನಸೌಧಕ್ಕೆ ಊಟ ತರಿಸಿಕೊಂಡು ಊಟ ಮಾಡಿದರು. ಭ್ರಷ್ಟಾಚಾರದ ಹಣದಲ್ಲಿ ನಾವು ಊಟ ಮಾಡುವುದಿಲ್ಲ ಎಂದು ಅವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಸುರೇಶ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವು ನಾಯಕರು ಅಹೋರಾತ್ರಿ ಧರಣಿ ನಡೆಸಿದರು. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಧರಣಿ ನಿಲ್ಲುವುದಿಲ್ಲ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಧರಣಿಗೂ ಮೊದಲು ಶಾಸಕರನ್ನ ಹೊರಗೆ ಬಿಟ್ಟು ಮಾರ್ಶಲ್ಗಳು ಬಾಗಿಲು ಹಾಕಿಕೊಂಡರು. ವಿಧಾನಸೌಧದ ಪೂರ್ವದ ಬಾಗಿಲನ್ನು ಮಾರ್ಶಲ್ಗಳು ಬಂದ್ ಮಾಡಿದ್ದರು. ಬಾಗಿಲು ತೆಗೆಯುವವರೆಗೂ ಶಾಸಕರು ಕಾದು ನಿಂತರು. ಬಾಗಿಲಲ್ಲೇ ಜೆಡಿಎಲ್ಪಿ ನಾಯಕ ಸುರೇಶ್ ಬಾಬು, ಬಿಜೆಪಿ ಉಪನಾಯಕ ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ಶಾಸಕರು ನಿಂತರು. ಸ್ಥಳಕ್ಕೆ ಬಂದ ಡಿಸಿಪಿ, ಬಾಗಿಲು ತೆಗೆಸಿ ಒಳಗೆ ಬಿಡಿಸಿದರು. ಇದೇ ವೇಳೆ, ಆರ್.ಅಶೋಕ್ ಅವರು ಪೊಲೀಸರ ಜತೆ ವಾಗ್ವಾದ ನಡೆಸಿದರು.