ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ವಿರೋಧಿಸಿ ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಜೆಡಿಎಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಕೆಲಹೊತ್ತು ಧರಣಿ ನಡೆಸಿ ನಂತರ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಬರಗಾಲದ ಸಂಕಷ್ಟದಿಂದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಜನಸಾಮಾನ್ಯರು, ರೈತರು, ಕಾಮಿರ್ಕರು ಈಗಾಗಲೇ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿದ್ದಾರೆ. ಇದೀಗ ಇಂಧನದ ಮೇಲಿನ ತೆರಿಗೆ 3ರೂ. ಹೆಚ್ಚು ಮಾಡಿರುವುದು ತೀವ್ರ ಖಂಡನೀಯ ಎಂದರು.
ಮುಖಂಡ ನವೀನಕುಮಾರ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಜನಪರ, ಬಡವರ ಪರ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುತ್ತಿದೆ. ಶ್ರೀಸಾಮಾನ್ಯರ ಮೇಲೆ ಇದೀಗ ಇಂಧನ ಬರೆ ಎಳೆದು ಸಂಕಷ್ಟಕ್ಕೆ ತಳ್ಳಿದೆ. ಬಡವರ ಬದುಕಿನ ಜತೆ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಇಂಧನದ ಮೇಲಿನ ತೆರಿಗೆ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಜೆಡಿಎಸ್ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಕ್ಷದ ಮುಖಂಡರಾದ ತುಳಸಿಕಾಂತ ಖೋಡೆ, ಶ್ರೀಶೈಲ ಗಡದಿನ್ನಿ, ಶಂಕರ ಪವಾರ, ವಿನಾಯಕ ಗಾಡಿವಡ್ಡರ, ನಾಗರಾಜ ಗುಡದರಿ, ಅಹ್ಮದ್ ಅರಸಿಕೇರಿ, ಪುನಿತ್ ಅಡಗಲ್ಲ, ಬಾಷಾ ಮುದಗಲ್, ಶಂಕರಗೌಡ ದೊಡ್ಡಮನಿ, ಶ್ರೀ ಕಾಂತ ತೆಲಗರ, ಭೀಮರಾಯ ಗುಡೇನಕಟ್ಟಿ, ಅಲ್ಲಿ ಸಂದಿನಲ್ಲಿ, ನವೀನ್ ಮಡಿವಾಳರ, ಬಸವರಾಜ ಹರವಿ, ದೊಡ್ಡಪ್ಪ ಧರಣಿ, ಮಲ್ಲಪ್ಪ ನವಲೂರ, ದಾದಾಪೀರ ರಾಟಿಮನಿ, ಸಿದ್ದು ಮಹಾಂತಒಡೆಯರ, ಮುಂತಾದವರು ಪ್ರತಿಭಟನೆಯಲ್ಲಿದ್ದರು.