ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಜೆಡಿಎಸ್ (JDS) ತರಾಟೆಗೆ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ನಂದಿನಿ ಇಲ್ಲದಿರುವಾಗ ಅಮುಲ್ ಖರೀದಿಸುವುದು ಕರ್ನಾಟಕದ ವಿರುದ್ಧದ ಕೃತ್ಯವಲ್ಲ ಎಂದು ರಾಜ್ಯದಿಂದಲೆ ಸಂಸದರಾಗಿರುವ ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman)ಹೇಳಿದ್ದಾರೆ. ಆದರೆ ನಂದಿನಿ ಇಲ್ಲದಾಗುವಂತೆ ಮಾಡಲು ಹವಣಿಸುತ್ತಿರುವವರು ಯಾರು ಎಂದು ಅವರು ಹೇಳಿಲ್ಲ. ಯಾಕೆಂದರೆ ಇದು ‘ಗುಜರಾತಿ ಕುತಂತ್ರಿ’ಗಳ ಕೃತ್ಯ ಎಂದು ಅವರಿಗೂ ತಿಳಿದಿದೆ ಎಂದು ಹೇಳಿದೆ. ರಾಜ್ಯದಿಂದಲೆ ಆಯ್ಕೆಯಾಗಿರುವ ನಿರ್ಮಲ ಸೀತಾರಾಮನ್ (Nirmala Sitharaman)ನಮ್ಮ ರೈತರ ಹಿತಾಸಕ್ತಿಗಳನ್ನು ಕಾಪಾಡುವಷ್ಟಾದರೂ ನಿಯತ್ತು ತೋರಬೇಕಿತ್ತು.
ಕನ್ನಡ ನೆಲದಲ್ಲೆ ನಿಂತು ಕನ್ನಡಿಗರ ವಿರುದ್ಧವೇ ಮಾತನಾಡುವ ಕರ್ನಾಟಕದಿಂದಲೇ ಆಯ್ಕೆಯಾದ ಬಿಜೆಪಿಯ(BJP) ಸಂಸದೆಯ ‘ಗುಜರಾತಿ ಗುಲಾಮಿ’ತನಕ್ಕೆ ನಾಚಿಕೆಯಾಗಬೇಕು. ಯಾವುದೆ ಕಾರಣಕ್ಕೂ ಗುಜರಾತಿ ಉದ್ಯಮಿಗಳಿಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಲಿಂಪಿ ವೈರಸ್’ನಿಂದಾಗಿ ಜಾನುವಾರುಗಳು ಅಸುನೀಗಿ ರೈತರು ಕಣ್ಣೀರು ಸುರಿಸುತ್ತಿರುವಾಗ, ಗೋವಿನ ಹೆಸರು ಹೇಳಿ ರಾಜಕೀಯ ಮಾಡುವ ಬಿಜೆಪಿ ಸರ್ಕಾರವಾಗಲಿ, ನಿರ್ಮಲ ಸೀತಾರಾಮನ್ ಆಗಲಿ ಅನುಕಂಪ ಕೂಡಾ ವ್ಯಕ್ತಪಡಿಸಿರಲಿಲ್ಲ. ಆದರೆ ಗುಜರಾತಿ ವ್ಯಾಪಾರಿಗಳ ಹಿತಾಸಕ್ತಿಗೆ ಧಕ್ಕೆಯಾದಾಗ ರಾಜ್ಯಕ್ಕೆ ಓಡೋಡಿ ಬರುತ್ತಾರೆ. ಹಾಗಾದರೆ ಇವರು ಯಾರ ಪರ? ಎಂದು ಪ್ರಶ್ನಿಸಿದೆ.