ಹಾಸನ: ಮುಂದೆ ನಡೆಯುವ ವಿಧಾನಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಅಭ್ಯರ್ಥಿಗಳ ಘೋಷಣೆ ಮಾಡುವ ಮೊದಲೆ ಒಂದು ಕಡೆ ಭವಾನಿ ರೇವಣ್ಣ ಅವರು ಕ್ಷೇತ್ರ ಸುತ್ತಿ ಪ್ರಚಾರದ ಮೂಲಕ ಬಿಂಭಿಸಿಕೊಳ್ಳುತ್ತಿದ್ದರೇ, ಇನ್ನೊಂದು ಕಡೆ ಸದ್ದಿಲ್ಲದೇ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಅವರ ಪುತ್ರ ಹೆಚ್.ಪಿ. ಸ್ವರೂಪ್ ಅವರು ಕೂಡ ಹಳ್ಳಿ ಹಳ್ಳಿ ಸುತ್ತಿ ಗಮನಸೆಳೆಯುತ್ತಿದ್ದಾರೆ. ಇದೊಂದು ರೀತಿ ಪಕ್ಷದಿಂದ ಟಿಕೆಟ್ ಪೈಟ್ ಎಂಬಂತೆ ಕಂಡು ಬಂದರೂ ಕೂಡ ಇನ್ನೊಂದು ದಿನದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಬಹಿರಂಗಪಡಿಸುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳಲ್ಲಿ ಅಭ್ಯರ್ಥಿಗಳ ಪ್ರಚಾರಗಳು ಕೂಡ ಹೆಚ್ಚಾಗು ತೊಡಗಿದ್ದು, ಇನ್ನು ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಕ್ಷೇತ್ರಗಳಲ್ಲಿ ಸುತ್ತಾಡಿ ಗಮನಸೆಳೆಯುವ ಕೆಲಸ ಮಾಡಲಾಗುತ್ತಿದೆ. ಹಾಸನದಲ್ಲಿ ಮುಂದುವರಿದ ಭವಾನಿ ರೇವಣ್ಣ ದಂಡಯಾತ್ರೆಯು ಮೂರನೇ ದಿನವು ಕೂಡ ಮುಂದುವರೆದಿದೆ. ಭವಾನಿಗೆ ಟಿಕೆಟ್ ಇಲ್ಲಾ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಸಂದೇಶವನ್ನು ಕೂಡ ಲೆಕ್ಕಿಸದೆ ಹಾಸನ ಕ್ಷೇತ್ರದಲ್ಲಿ ರೌಂಡ್ಸ್ ನಿರಂತರವಾಗಿದೆ. ತಾನೇ ಅಭ್ಯರ್ಥಿ ಎಂಬ ವಿಶ್ವಾಸದಲ್ಲಿ ಎದೆಗುಂದದೆ ಮುನ್ಜುಗ್ಗುತ್ತಿರೊ ಭವಾನಿ ರೇವಣ್ಣ ಅವರಿಗೆ ಪತಿ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಸಾಥ್ ನೀಡಿದ್ದಾರೆ. ಹಾಸನ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಶನಿವಾರವು ಕೂಡ ಭರ್ಜರಿ ರೌಂಡ್ಸ್ ನಡೆದಿದೆ. ಅತ್ತ ಕುಮಾರಸ್ವಾಮಿ ಅವರು ರೆಡ್ ಸಿಗ್ನಲ್ ಕೊಟ್ಟರೂ ತಲೆಕೆಡಿಸಿಕೊಳ್ಳದೆ ತಮ್ಮದೇ ದಾಟಿಯಲ್ಲಿ ಪ್ರಚಾರ ಆರಂಭಿಸಿರುವುದು ಜನರಲ್ಲಿ ಗೊಂದಲ ಉಂಟು ಮಾಡಿದಲ್ಲದೇ ಅಭ್ಯರ್ಥಿಗಳ ಬಗ್ಗೆ ಕುತುಹಲ ಮೂಡಿಸಿದೆ. ಭಾನುವಾರದ ಸಭೆಯ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದ ಕಾರ್ಯಕರ್ತರ ಮನದಲ್ಲಿ ತಮ್ಮ ಹೆಸರು ರಿಜಿಸ್ಟರ್ ಮಾಡಲು ಈ ಕಸರತ್ತು ನಡೆಸಿರಬಹುದಾ! ಹೋದಲ್ಲೆಲ್ಲಾ ಭವಾನಿ ಹೆಸರು ಓಡಾಡುತ್ತಿದೆ ಎನ್ನೋದು ಕಾರ್ಯಕರ್ತರಿಗೆ ಮನವರಿಕೆ ಆದರೆ ತಮ್ಮ ಪರ ಮಾತಾಡಬಹುದು.
ಜೊತೆಗೆ ಕ್ಷೇತ್ರದಾದ್ಯಂತ ಭವಾನಿ ಹವಾ ಇದೆ, ಅವರೇ ಪ್ರೀತಂಗೌಡ ವಿರುದ್ಧ ಪ್ರಭಲ ಅಭ್ಯರ್ಥಿ ಆಗಬಲ್ಲರು ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಲು ಕಸರತ್ತು. ಒಂದು ವೇಳೆ ಕಾರ್ಯಕರ್ತರ ಮನದಲ್ಲಿ ಭವಾನಿ ಸಮರ್ಥ ಅಭ್ಯರ್ಥಿ ಎಂದು ಖಾತ್ರಿಯಾದರೆ ಜೆಡಿಎಸ್ ನಾಯಕರ ಸಭೆಯಲ್ಲಿ ತಮ್ಮ ಹೆಸರು ಹೇಳ್ತಾರೆ. ಹೆಚ್ಚು ಜನರು ತಮ್ಮ ಹೆಸರು ಹೇಳಿದ್ರೆ ಕುಮಾರಸ್ವಾಮಿ ಕೂಡ ಮನಸ್ಸು ಬದಲಾಯಿಸಬಹುದು. ಕುಮಾರಸ್ವಾಮಿ ಎದುರು ಹೆಚ್ಚು ಜನರು ತಮ್ಮ ಹೆಸರು ಹೇಳಿದ್ರೆ ತಮ್ಮ ಹಠ ಗೆಲ್ಲಲು ಸಾಧ್ಯ ಎನ್ನೋ ಲೆಕ್ಕಾಚಾರ ಅವರದಾಗಿದೆ. ಹಾಗಾಗಿಯೇ ಕುಮಾರಸ್ವಾಮಿ ಏನೇ ಹೇಳಿದ್ರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಖಾಡಕ್ಕಿಳಿದು ಪ್ರಚಾರ ಕೈಗೊಂಡಿರುವುದು ಎಂಬುದು ಪಕ್ಷದಲ್ಲೆ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಕೊನೆಯ ದಿನವಾದ ಶನಿವಾರದಂದು ಕೂಡ ಏಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿದ್ದರು. ಬೈಲಹಳ್ಳಿ, ಕಂದಲಿ, ಹನುಮಂತಪುರ, ತಟ್ಟೆಕೆರೆ, ಹೂವಿನಹಳ್ಳಿ, ಮಣಚನಹಳ್ಲಿ,,ತೇಜೂರು ಭಾಗದಲ್ಲಿ ಪ್ರಚಾರ ಮಾಡಿ ಕೈಮುಗಿದು ಮತ ಕೇಳುತ್ತಿದ್ದರು. ಭವಾನಿ ಪರ ಅಲೆ ಎಬ್ಬಿಸಿ ಕುಮಾರಸ್ವಾಮಿ ಕರೆದಿರೋ ಸಭೆಯಲ್ಲಿ ತಮ್ಮ ಪರ ಒತ್ತಡ ಹಾಕಿಸಲು ಈ ತಂತ್ರವಾಗಿದೆ. ಬೈಲಹಳ್ಳಿಯ ಲಕ್ಷ್ಮಿಜನಾರ್ದನ ದೇಗುಲದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ಜೊತೆಯಲ್ಲಿ ಭವಾನಿಗೆ ಸಾತ್ ನೀಡುತ್ತಿರೊ ಪತಿ ರೇವಣ್ಣ ಹಾಗು ಪುತ್ರ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ.
ಇನ್ನೊಂದು ಕಡೆ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಅವರ ಪುತ್ರ ಹೆಚ್.ಪಿ. ಸ್ವರೂಪ್ ಅವರು ಕೂಡ ಭರವಸೆಯಲ್ಲಿ ಈಗಾಗಲೇ ಹಾಸನ ತಾಲೂಕಿನ ಬಹುತೇಕ ಹಳ್ಳಿ ಮಟ್ಟಕ್ಕೆ ಹೋಗಿ ಜೆಡಿಎಸ್ ಪಕ್ಷದಿಂದ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಕೂಡ ಹಾಸನ ಕ್ಷೇತ್ರದ ಬಗ್ಗೆ ಸ್ವರೂಪ್ ಗೆ ಟಿಕೆಟ್ ಕೊಡಲು ಅನೇಕ ಬಾರಿ ಸೂಚನೆ ಕೊಟ್ಟಂತೆ ಭಾಷಣದಲ್ಲಿ ಮಾತನಾಡಿದ್ದಾರೆ. ಅಂದಿನಿಂದಲೇ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರು ಕೂಡ ವಿಶ್ವಾಸದಲ್ಲೆ ಸದ್ದಿಲ್ಲದೇ ಭರದ ಪ್ರಚಾರ ಮಾಡುತ್ತಿದ್ದಾರೆ. ಟಿಕೆಟ್ ಪೈಟ್ ಇನ್ನೊಂದು ದಿನದಲ್ಲಿ ಅಂತ್ಯ ಕಾಣಲಿದ್ದು, ಯಾರಿಗೆ ಒಲಿಯಲಿದೆ ಟಿಕೆಟ್ ಎಂಬುದನ್ನು ಕಾದು ನೋಡಬೇಕಾಗಿದೆ.