ಬಾಲಿವುಡ್ ನಟಿ ಜಿಯಾ ಖಾನ್ ನಿಧನರಾಗಿ 10 ವರ್ಷಗಳೆ ಕಳೆದಿದೆ. ಆದರೆ ಇಂದಿಗೂ ಆಕೆಯ ಸಾವಿನ ಕುರಿತು ಯಾವುದೇ ತೀರ್ಪು ಪ್ರಕಟವಾಗಿರಲಿಲ್ಲ. ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಜಿಯಾ ಖಾನ್ ಸಾವಿನ ತೀರ್ಪು ಪ್ರಕಟವಾಗಲಿದೆ.
2013ರ ಜೂನ್ 3ರಂದು ನಟಿ ಜಿಯಾ ಖಾನ್ ಮೃತದೇಹ ಮುಂಬೈನ ಜುಹೂ ಅಪಾರ್ಟ್ಮೆಂಟ್ನಲ್ಲಿ ಪತ್ತೆ ಆಗಿತ್ತು. ಆದರೆ ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಸುದೀರ್ಘ ತನಿಖೆ ನಡೆದಿದೆ. ಘಟನೆ ನಡೆದು ಬರೋಬ್ಬರಿ 10 ವರ್ಷಗಳು ಕಳೆದಿದ್ದು, ಇದೀಗ ಸಿಬಿಐ ವಿಶೇಷ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುತ್ತಿದೆ.
ಗುರುವಾರ (ಏಪ್ರಿಲ್ 20) ಜಿಯಾ ಖಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆ ನಡೆದಿದ್ದು, ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಏಪ್ರಿಲ್ 28ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಸೂರಜ್ ಪಾಂಚೋಲಿ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಮೂಡಿದೆ.
ಜಿಯಾ ಖಾನ್ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಸೂರಜ್ ಪಾಂಚೋಲಿ ಜೊತೆಗಿನ ಸಂಬಂಧದಿಂದ ತಾವು ಅನುಭವಿಸಿದ ಕಷ್ಟಗಳನ್ನು ಎಳೆಎಳೆಯಾಗಿ ವಿವರಿಸಿದ್ದರು. ಇದೀಗ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ತಪ್ಪಿತಸ್ಥ ಎಂದು ಸಾಬೀತಾದರೆ ಕಠಿಣ ಶಿಕ್ಷೆ ಆಗುವ ಸಾಧ್ಯತೆ ಇದೆ.