ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಆ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ. ಈ ವಿಚಾರವಾಗಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮಸೂದೆಯ ಷರತ್ತುಗಳ ಬಗ್ಗೆ ಉದ್ಯಮ ತಜ್ಞರು ಮತ್ತು ಇತರ ಇಲಾಖೆಗಳ ಬಳಿ ಸಮಾಲೋಚನೆ ನಡೆಸಿ ನಂತರವೇ ಅದನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಉದ್ಯಮದ ದಿಗ್ಗಜರಾದ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಭಯಪಡುವ ಅಗತ್ಯವಿಲ್ಲ. ಕರ್ನಾಟಕ ಪ್ರಗತಿಪರ ರಾಜ್ಯ. ಮಸೂದೆಯ ಷರತ್ತುಗಳು ಒಂದು ಸಲಹೆಯಷ್ಟೇ. ಉದ್ಯಮ ವಲಯವು ಅದರ ಅಗತ್ಯವಿಲ್ಲ ಎಂದು ಭಾವಿಸಿದರೆ, ನಾವು ಅದನ್ನು ಗಮನಿಸುತ್ತೇವೆ. ನಾವು ಪೈ ಹಾಗೂ ಮಜುಂದಾರ್ ಅವರೊಂದಿಗೆ ಸಮಾಲೋಚನೆ ನಡೆಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಎಂಬಿ ಪಾಟೀಲ್ ಅಭಯ
ಮೀಸಲಾತಿ ವಿಚಾರವಾಗಿ ಕೈಗಾರಿಕೋದ್ಯಮಿಗಳ ಜತೆ ಪುನರ್ ಚರ್ಚೆಗೆ ಸಿದ್ಧ ಎಂದು ಸಚಿವ ಎಂಬಿ ಪಾಟೀಲ್ ಕೂಡ ಹೇಳಿದ್ದಾರೆ. ನಾವು ಚೀನಾದಂತಹ ದೇಶದೊಂದಿಗೆ ಸೆಣಸಾಡಬೇಕಿದೆ. ಕನ್ನಡಿಗರನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಸಿಎಂ, ಡಿಸಿಎಂ ಹಾಗೂ ಕಾರ್ಮಿಕ ಸಚಿವರು, ಕಾನೂನು ಸಚಿವರ ಜೊತೆಗೆ ಚರ್ಚಿಸುತ್ತೇನೆ. ಕನ್ನಡಿಗರ ರಕ್ಷಣೆಯ ಜೊತೆಗೆ ಉದ್ಯಮಗಳ ರಕ್ಷಣೆಯೂ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.