SBI 2024-25ರ ಹಣಕಾಸು ವರ್ಷದಲ್ಲಿ 12,000 ಮಂದಿ ಹೊಸ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದೆ. ಪ್ರೊಬೇಶನರಿ ಆಫೀಸರ್ಸ್ ಮತ್ತು ಅಸೋಸಿಯೇಟ್ಸ್ಗಳಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳಿಗೆ ಎಂಜಿನಿಯರಿಂಗ್ ಪದವೀಧರರನ್ನು ಸೇರಿಸಿಕೊಳ್ಳಲಾಗಲಿದೆ.
ಎಸ್ಬಿಐ ಛೇರ್ಮನ್ ದಿನೇಶ್ ಖರ ನೀಡಿದ ಮಾಹಿತಿ ಪ್ರಕಾರ ನೇಮಕಾತಿ ಆಗುವ ಶೇ. 85ರಷ್ಟು ಹುದ್ದೆಗಳಿಗೆ ಎಂಜಿನಿಯರ್ಗಳ ನೇಮಕಾತಿ ಆಗಲಿದೆ.
ಡಿಜಿಟಲ್ ವಿಭಾಗದಲ್ಲಿ ಸರಿಯಾದ ರೀತಿಯಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇಲ್ಲದಿರುವ ಕಾರಣವೊಡ್ಡಿ ಆರ್ಬಿಐ ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ಹೇರಿದ ಕ್ರಮ ಇತ್ತೀಚೆಗಷ್ಟೇ ನಡೆದಿದೆ. ಕೋಟಕ್ ಮಾತ್ರವಲ್ಲ, ಭಾರತದ ಹೆಚ್ಚಿನ ಬ್ಯಾಂಕುಗಳಲ್ಲಿ ಇನ್ನೂ ಹಳೆಯ ತಂತ್ರಜ್ಞಾನವೇ ಚಾಲ್ತಿಯಲ್ಲಿದೆ. ಒಂದೊಂದಾಗಿ ಬ್ಯಾಂಕುಗಳ ಮೇಲೆ ಆರ್ಬಿಐ ಕ್ರಮ ಜರುಗಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಎಸ್ಬಿಐ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳಲು ಹೊರಟಿರಬಹುದು. ವರದಿಗಳ ಪ್ರಕಾರ ಎಸ್ಬಿಐ ಸಾಕಷ್ಟು ದೊಡ್ಡ ಮಟ್ಟದಲ್ಲಿ ತಂತ್ರಜ್ಞಾನಕ್ಕೆ ವ್ಯಯಿಸಲು ಹೊರಟಿದೆ. ಸದ್ಯ ಭಾರತದ ಬ್ಯಾಂಕಿಂಗ್ ವಲಯದಲ್ಲಿ ತಂತ್ರಜ್ಞಾನ ನಿರ್ವಹಣಾ ವೆಚ್ಚ ಒಟ್ಟು ಬಜೆಟ್ನಲ್ಲಿ ಸರಾಸರಿ ಶೇ. 7ರಿಂದ 8ರಷ್ಟಿದೆ. ಎಸ್ಬಿಐ ಇದಕ್ಕಿಂತ ಬಹಳ ಹೆಚ್ಚಿನ ಮಟ್ಟದಲ್ಲಿ ತಂತ್ರಜ್ಞಾನಕ್ಕಾಗಿ ವ್ಯಯಿಸಲಿದೆ ಎನ್ನುವ ಮಾಹಿತಿಯನ್ನು ಎಸ್ಬಿಐ ಛೇರ್ಮನ್ ನೀಡಿದ್ದಾರೆ.