ವಾಷಿಂಗ್ಟನ್: ವಾರದ ಹಿಂದೆ ಬಂಧನಕ್ಕೊಳಗಾಗಿರುವ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಕರ್ತ ಇವಾನ್ ಗೆರ್ಶ್ಕೋವಿಚ್ ಅವರನ್ನು ಬಿಡುಗಡೆ ಮಾಡುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾವನ್ನು ಆಗ್ರಹಿಸಿದ್ದಾರೆ.
ಇವಾನ್ ಗೆರ್ಶ್ಕೋವಿಚ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ರಷ್ಯಾದ ಭದ್ರತಾ ಸೇವೆ ಬಂಧಿಸಿದೆ. ಆದರೆ ಇವಾನ್ ಬಂಧನದ ಆರೋಪವನ್ನು ರಷ್ಯಾ ತಳ್ಳಿಹಾಕಿದೆ. ಶ್ವೇತಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಬೈಡನ್, ‘ಅವರನ್ನು ಬಿಡಿ’ ಎಂದಿದ್ದಾರೆ.
ರಷ್ಯಾದ ರಾಜತಾಂತ್ರಿಕ ಅಧಿಕಾರಿಗಳು ಅಥವಾ ಪತ್ರಕರ್ತರನ್ನು ಅಮೆರಿಕದಿಂದ ಹೊರಹಾಕುತ್ತೀರಾ ಎಂಬ ಪ್ರಶ್ನೆಗೆ ‘ಸದ್ಯಕ್ಕೆ ಅಂಥ ಯೋಚನೆ ಇಲ್ಲ’ ಎಂದು ತಿಳಿಸಿದರು.
ಅಮೆರಿಕಾದ ಶೀತಲ ಸಮರದ ನಂತರ ಬೇಹುಗಾರಿಕೆ ಆರೋಪದ ಮೇಲೆ ಪತ್ರಕರ್ತರೊಬ್ಬರನ್ನು ಬಂಧಿಸಿರುವುದು ಇದೇ ಮೊದಲಾಗಿದೆ. ಈ ಮಧ್ಯೆ ರಷ್ಯಾಗೆ ಪ್ರವಾಸ ಕೈಗೊಳ್ಳದಂತೆ ಹಾಗೂ ರಷ್ಯಾದಲ್ಲಿ ಇರುವವರು ಕೂಡಲೇ ಅಲ್ಲಿಂದ ಹೊರಡುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.