ಕಾಬೂಲ್: ಅಮೆರಿಕ ಸೇನಾ ಪಡೆಗಳು ಜನರನ್ನು ನಡು ನೀರಲ್ಲಿ ಕೈಬಿಟ್ಟು ನಿರ್ಗಮಿಸುತ್ತಿದ್ದಂತೆಯೇ ಅಫ್ಘಾನಿಸ್ತಾನವನ್ನು ಮರಳಿ ಆಕ್ರಮಿಸಿಕೊಂಡಿದ್ದ ತಾಲಿಬಾನ್ ಸಂಘಟನೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಎರಡು ವರ್ಷಗಳಿಂದ ಅಫ್ಘಾನಿಸ್ತಾನವನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿರುವ ತಾಲಿಬಾನ್ನಲ್ಲಿ ಗುಂಪುಗಳು ಸೃಷ್ಟಿಯಾಗುತ್ತಿವೆ. ವಿದೇಶಿ ಉಗ್ರರ ಸುರಕ್ಷಿತ ಸ್ವರ್ಗವಾಗಿ ಪರಿಣಮಿಸುತ್ತಿದೆ. ಇದರ ಪರಿಣಾಮ ದೇಶ ನಾಗರಿಕ ಯುದ್ಧದತ್ತ ಸಾಗುತ್ತಿದೆ ಎಂದು ಅಫ್ಘಾನಿಸ್ತಾನದ ಮಾಜಿ ಕಮಾಂಡರ್ ಒಬ್ಬರು ತಿಳಿಸಿದ್ದಾರೆ.
“ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಬಹಳ ಗಂಭೀರ ಹಾಗೂ ಅಪಾಯಕಾರಿಯಾಗಿದೆ. ಅದು ವಿನಾಶಕಾರಿ ದಿಕ್ಕಿನತ್ತ ಸಾಗುತ್ತಿದೆ. ಇದು ಮತ್ತೊಂದು ನಾಗರಿಕ ಯುದ್ಧಕ್ಕೆ ಎಡೆಮಾಡಿಕೊಡಬಹುದು ಅಥವಾ ಅಫ್ಘಾನಿಸ್ತಾನ ದೇಶವನ್ನೇ ಇಬ್ಭಾಗ ಮಾಡಬಹುದು. ಕಳೆದ ಎರಡು ವರ್ಷಗಳಿಂದ ಅದನ್ನು ನೀವು ನೋಡುತ್ತಿದ್ದೀರಿ. ಅಫ್ಘಾನಿಸ್ತಾನವನ್ನು ಉಗ್ರರು ನಿಯಂತ್ರಿಸುತ್ತಿದ್ದಾರೆ ಮತ್ತು ಅದು ಉಗ್ರರ ಕೈಗಳಿಗೆ ಸಿಕ್ಕಿದೆ” ಎಂದು ಲೆಫ್ಟಿನೆಂಟ್ ಜನರಲ್ ಹೈಬತುಲ್ಲಾ ಅಲಿಜೈ ತಿಳಿಸಿದರು.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನದ ಪ್ರಸಕ್ತ ಸನ್ನಿವೇಶದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಅಫ್ಘಾನಿಸ್ತಾನ ಹಾಗೂ ಅಲ್ಲಿನ ಜನರನ್ನು ತಾಲಿಬಾನಿಗಳಿಗೆ ಒಪ್ಪಿಸಿ ದಿಢೀರನೆ ಸೇನೆಯನ್ನು ವಾಪಸ್ ಕರೆಸಿಕೊಂಡ ಜೋ ಬೈಡನ್ ಆಡಳಿತವನ್ನು ಅವರು ದೂಷಿಸಿದರು.
ತಾಲಿಬಾನ್ ಆಡಳಿತದ ವಿಸ್ತರಣೆ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಅನೇಕ ಉಗ್ರ ಸಂಘಟನೆಗಳು ತಮ್ಮ ಜಾಲ ವಿಸ್ತರಿಸಿಕೊಂಡಿವೆ. ಅಲ್- ಶಬಾಬ್ನಂತಹ ಆಫ್ರಿಕಾದ ಭಯೋತ್ಪಾದನಾ ಗುಂಪುಗಳು ಕೂಡ ಅಫ್ಘಾನಿಸ್ತಾನದಲ್ಲಿ ನೆಲೆಯೂರಿವೆ. ಅವು ತಮ್ಮ ಉಗ್ರರಿಗೆ ಅಲ್ಲಿ ತರಬೇತಿ ನೀಡುವುದನ್ನು ಆರಂಭಿಸಿದ್ದಾರೆ. ಇದೆಲ್ಲವೂ ತಾಲಿಬಾನ್ ಆಡಳಿತದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.