ಕೇಪ್ ಟೌನ್: ವಿಷಾನಿಲ ಸೋರಿಕೆಯಿಂದಾಗಿ ಕನಿಷ್ಠ 16 ಜನ ಮೃತಪಟ್ಟಿದ್ದು ಸಾಕಷ್ಟು ಮಂದಿಗೆ ಆರೋಗ್ಯ ಸಮಸ್ಯೆಯಾಗಿರುವ ಘಟನೆ ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ನ ಬೋಕ್ಸ್ಬರ್ಗ್ ಬಳಿ ಸಂಭವಿಸಿದೆ.
ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿ ಈ ವಿಷಾನಿಲ ಸೋರಿಕೆಯಾಗಿರಬಹುದು ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ 1 ವರ್ಷದ ಮಗು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ. ಅನಿಲ ಸೋರಿಕೆಯಿಂದಾಗಿ ಮೃತದೇಹಗಳು ಪ್ರದೇಶದಾದ್ಯಂತ ಅಲ್ಲಲ್ಲಿ ಚದುರಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿವೆ.
ಈ ಮೊದಲು ದುರಂತದಲ್ಲಿ 24 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ರಕ್ಷಣಾ ತಂಡ ಮೃತದೇಹಗಳನ್ನು ಮರುಎಣಿಕೆ ಮಾಡಿದ್ದು, ಮೃತರ ಸಂಖ್ಯೆಯನ್ನು 16 ಎಂದು ಖಚಿತಪಡಿಸಲಾಗಿದೆ. ಸದ್ಯ ಅನಿಲ ಸೋರಿಕೆ ಇದೀಗ ನಿಂತಿದ್ದು, 100 ಮೀ. ಆಸುಪಾಸಿನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.