ಖ್ಯಾತ ನೃತ್ಯ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ಜಾನಿ ಮಾಸ್ಟರ್ ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಜಾನಿ ಮಾಸ್ಟರ್ ಪ್ರಮುಖ ಪ್ರಾಜೆಕ್ಟ್ ಒಂದನ್ನು ಪ್ರಾರಂಭಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದ ಅವರ ಇದೇ ವೇಳೆ ಅಪ್ಪು ಹಾಗೂ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರಂತೆ. ಈ ಬಗ್ಗೆ ಸ್ವತಃ ಜಾನಿ ಮಾಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಮುಖ ಪ್ರಾಜೆಕ್ಟ್ ಒಂದನ್ನು ಪ್ರಾರಂಭ ಮಾಡಲಿದ್ದು ಅದಕ್ಕೆ ಮುಂಚೆ ಅಪ್ಪು ಹಾಗೂ ಡಾ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಿ ಅವರ ಆಶೀರ್ವಾದವನ್ನು ಪಡೆದುಕೊಂಡೆ ಎಂದು ಟ್ವಿಟ್ಟರ್ನಲ್ಲಿ ಜಾನಿ ಮಾಸ್ಟರ್ ಬರೆದುಕೊಂಡಿದ್ದಾರೆ. ಜಾನಿ ಮಾಸ್ಟರ್, ಕನ್ನಡದಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು, ಇದೀಗ ಜಾನಿ ಮಾಸ್ಟರ್ ಟ್ವೀಟ್ ಬಳಿಕ ಈ ಸುದ್ದಿ ಬಹುತೇಕ ಖಾತ್ರಿ ಆಗಿದೆ. ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಡ್ಯಾನ್ಸ್ ಅಕಾಡೆಮಿ ತೆರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತೆಲುಗು ಚಿತ್ರರಂಗದಲ್ಲಿ ಜಾನಿ ಮಾಸ್ಟರ್ ಗೆ ಸಾಕಷ್ಟು ಭೇಡಿಕೆ ಇದೆ. ಅಲ್ಲದೆ ಕನ್ನಡದಲ್ಲೂ ಹಲವು ಸಿನಿಮಾಗಳಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಆದರೆ ಕಳೆದ ವರ್ಷ ಜಾನಿ ಮಾಸ್ಟರ್ ಮೇಲೆ ಅವರ ತಂಡದಲ್ಲಿಯೇ ಕೆಲಸ ಮಾಡುವ ಯುವತಿಯೊಬ್ಬಾಕೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಹೀಗಾಗಿ ಜಾನಿ ಮಾಸ್ಟರ್ ಬಂಧನವಾಗಿತ್ತು.
2024ರ ಸೆಪ್ಟೆಂಬರ್ 19 ರಂದು ಜಾನಿ ಮಾಸ್ಟರ್ ಬಂಧನವಾಗಿತ್ತು. ಅಕ್ಟೋಬರ್ 24ರಂದು ಜಾನಿ ಮಾಸ್ಟರ್ಗೆ ಜಾಮೀನು ದೊರಕಿತು. ಇದೀಗ ಆ ಎಲ್ಲಾ ಘಟನೆಗಳ ಬಳಿಕ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಹೊಸ ಪ್ರಾಜೆಕ್ಟ್ ಆರಂಭಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.