ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವುದರಲ್ಲಿ ಜೋಶ್ ಹ್ಯಾಝಲ್ವುಡ್ ಅಗ್ರ ಸ್ಥಾನಕ್ಕೇರಿದ್ದಾರೆ.
ಬ್ರಿಸ್ಬೇನ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೊಹ್ಲಿ ಕೇವಲ 3 ರನ್ಗಳಿಸಿ ಹ್ಯಾಝಲ್ವುಡ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ಗಳ ಪಟ್ಟಿಯಲ್ಲಿ ಜೋಶ್ ಹ್ಯಾಝಲ್ವುಡ್ ನಂಬರ್-1 ಸ್ಥಾನ ಅಲಂಕರಿಸಿದರು. ಅದು ಸಹ ನ್ಯೂಝಿಲೆಂಡ್ ವೇಗಿ ಟಿಮ್ ಸೌಥಿ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
ನ್ಯೂಝಿಲೆಂಡ್ ತಂಡದ ಟಿಮ್ ಸೌಥಿ ಹಾಗೂ ಕೊಹ್ಲಿ 39 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಟೆಸ್ಟ್ನಲ್ಲಿ 3 ಬಾರಿ, ಏಕದಿನ ಕ್ರಿಕೆಟ್ನಲ್ಲಿ 7 ಬಾರಿ ಹಾಗೂ ಟಿ20 ಪಂದ್ಯದಲ್ಲಿ ಒಮ್ಮೆ ಕೊಹ್ಲಿಯನ್ನು ಔಟ್ ಮಾಡುವಲ್ಲಿ ಸೌಥಿ ಯಶಸ್ವಿಯಾಗಿದ್ದರು. ಈ ಮೂಲಕ ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಎನಿಸಿಕೊಂಡಿದ್ದರು.
ಇದೀಗ ಈ ದಾಖಲೆಯನ್ನು ಸರಿಗಟ್ಟುವ ಮೂಲಕ ಜೋಶ್ ಹ್ಯಾಝಲ್ವುಡ್ ಅಗ್ರಸ್ಥಾನಕ್ಕೇರಿದ್ದಾರೆ.