ಮಿಸ್ ಯೂನಿವರ್ಸ್ ಪಟ್ಟ ಪಡಿಬೇಕು ಅಂದರೆ ಅದು ಸುಮ್ಮನೆ ಮಾತನಲ್ಲ. ಅದರಲ್ಲೂ 60ರ ಹರೆಯದಲ್ಲಿ ಮಿಸ್ ಯುನಿವರ್ಸ್ ಕಿರಿಟ ತೊಟ್ಟು ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದಾರೆ ಈ 60 ವರ್ಷ ವಯಸ್ಸಿನ ಪತ್ರಕರ್ತೆ.
60 ವರ್ಷದ ಅರ್ಜೆಂಟೀನಾದ ಅಲೆಜಾಂಡ್ರಾ ಮಾರಿಸಾ ರೊಡ್ರಿಗಸ್ ಸೌಂದರ್ಯ ಸ್ಪರ್ಧೆಯ ಸ್ಟೀರಿಯೊಟೈಪ್ ಬ್ರೇಕ್ ಮಾಡಿ ಈಗ ವಿಶ್ವಾದ್ಯಂತ ಸುದ್ದಿಯಾಗಿದ್ದಾರೆ.
ಬ್ಯೂನಸ್ ಐರಿಸ್ ಪ್ರಾಂತ್ಯದ ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಅಚ್ಚಳಿಯದಂತೆ ಉಳಿಸಿದ್ದಾರೆ ಈ 60ರ ಮಹಿಳೆ.
ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾ ಮೂಲದ ರೋಡ್ರಿಗಸ್ ಕೇವಲ ಸೌಂದರ್ಯವತಿ ಮಾತ್ರವಲ್ಲ. ಅವರು ಅನುಭವಿ ವಕೀಲರು ಮತ್ತು ಪತ್ರಕರ್ತೆ ಕೂಡಾ.
ಇವರ ಗೆಲುವು ಸೌಂದಯ ಸ್ಪರ್ಧೆಗಳ ಪ್ರಮುಖ ಮಾನದಂಡವಾದ ವಯಸ್ಸನ್ನೇ ಲೆಕ್ಕಕ್ಕೆ ಇಲ್ಲದಂತೆ ಮಾಡಿ ಮೇಲುಗೈ ಸಾಧಿಸಿದೆ. ಅಂತಹ ಪ್ರತಿಷ್ಠಿತ ಸೌಂದರ್ಯ ಪ್ರಶಸ್ತಿಯನ್ನು ಪಡೆದ ತನ್ನ ವಯಸ್ಸಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೇ 2024 ರಂದು ನಡೆಯಲಿರುವ ಮಿಸ್ ಯೂನಿವರ್ಸ್ ಅರ್ಜೆಂಟೀನಾಗೆ ಮುಂಬರುವ ರಾಷ್ಟ್ರೀಯ ಆಯ್ಕೆಯಲ್ಲಿ ಬೊನಸ್ ಐರಿಸ್ ಅನ್ನು ಪ್ರತಿನಿಧಿಸಲು ಇವರು ತಯಾರಿ ನಡೆಸುತ್ತಿದ್ದಾರೆ. ಮಿಸ್ ಯೂನಿವರ್ಸ್ ವರ್ಲ್ಡ್ನ ಜಾಗತಿಕ ವೇದಿಕೆಯಲ್ಲಿ ರೋಡ್ರಿಗಸ್ ಅರ್ಜೆಂಟೀನಾದ ಧ್ವಜವನ್ನು ಹಾರಿಸಲಿದ್ದಾರೆ. ಸ್ಪರ್ಧೆಯನ್ನು ಸೆಪ್ಟೆಂಬರ್ 28, 2024 ರಂದು ಮೆಕ್ಸಿಕೋದಲ್ಲಿ ನಡೆಯಲಿದೆ.
ಮಿಸ್ ಯೂನಿವರ್ಸ್ ಸಂಸ್ಥೆಯು ಇನ್ನು ಮುಂದೆ ಸ್ಪರ್ಧೆಯ ಸ್ಪರ್ಧಿಗಳಿಗೆ ವಯಸ್ಸಿನ ಮಿತಿಗಳನ್ನು ಹೊಂದಿರುವುದಿಲ್ಲ ಎಂದು ಕಳೆದ ವರ್ಷ ಘೋಷಿಸಿತು. ಈ ವರ್ಷದಿಂದ 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಹಿಂದೆ, 18-28 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಸ್ಪರ್ಧೆಯನ್ನು ಪ್ರವೇಶಿಸಬಹುದಾಗಿತ್ತು.ಅದರೆ ಇದೀಗ ವಯಸ್ಸಿನ ಮಿತಿ ಇಲ್ಲವಾಗಿದೆ.
ಅವರು ಲಾ ಪ್ಲಾಟಾದ ವಕೀಲೆ ಮತ್ತು ಪತ್ರಕರ್ತೆ. ಶಿಕ್ಷಣ ಮುಗಿಸಿದ ನಂತರ, ಅವರು ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ . ನಂತರ, ಅವರು ಕಾನೂನು ಅಧ್ಯಯನ ಮಾಡಿದರು. ಆಸ್ಪತ್ರೆಯ ಕಾನೂನು ಸಲಹೆಗಾರರಾದರು.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ರೊಡ್ರಿಗಸ್ ತನ್ನ 60 ನೇ ವಯಸ್ಸಿನಲ್ಲಿ ತನ್ನ ಸೌಂದರ್ಯ ಕಾಪಾಡಲು ತನ್ನ ಜೀವನಶೈಲಿಯೇ ಕಾರಣ ಎಂದಿದ್ದಾರಂತೆ. ಆರೋಗ್ಯಕರ ಜೀವನ ಶೈಲಿಯಿಂದ ಅವರು ಇಷ್ಟು ಚೆನ್ನಾಗಿದ್ದಾರೆ ಎನ್ನಲಾಗಿದೆ.
ಆರೋಗ್ಯಕರ ಜೀವನ, ಚೆನ್ನಾಗಿ ತಿನ್ನುವುದು, ದೈಹಿಕ ಚಟುವಟಿಕೆ ಮಾಡುವುದು ಮೂಲಭೂತ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮನ್ನು ನಾವು ಸಾಮಾನ್ಯವಾಗಿ ಆರೈಕೆ ಮಾಡಬೇಕು ಎಂದು ತಿಳಿಸಿದ್ದಾರೆ.