ಬೆಂಗಳೂರು: ಪತ್ರಕರ್ತರು ಕ್ಷುಲ್ಲಕ ವಿಚಾರಕ್ಕೆ ಮಹತ್ವ ಕೊಡುವುದು ಬೇಡ ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದಾರೆ.
ಆ ಸಂಬಂಧ ಮಾತನಾಡಿದ ಅವರು, ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸಂವಿಧಾನವೇ ಧರ್ಮಗ್ರಂಥವಾಗಿರಬೇಕು. ರಾಜಕೀಯ ಧರ್ಮ ಅನುಸರಿಸುವುದೇ ನಮ್ಮ ಕರ್ತವ್ಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜನ ನಮ್ಮನ್ನು ಆಯ್ಕೆ ಮಾಡಿದ ಬಳಿಕ ನಾವು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ಅದೇ ನಮಗೆ ಧರ್ಮ ಗ್ರಂಥ, ಯಾವುದೇ ಪಕ್ಷ, ಪಕ್ಷದ ವ್ಯಕ್ತಿ ಆಡಳಿತಕ್ಕೆ ಬಂದರೂ ರಾಜಕೀಯ ಧರ್ಮ ಅನುಸರಿಸಿದರೆ ಮಾತ್ರ ಸಂವಿಧಾನಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದರು.
ಸರ್ಕಾರದ ತಪ್ಪನ್ನು ನೇರವಾಗಿ ಹೇಳುವ ಧಾರ್ಷ್ಟ್ಯವನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು. ಅಸಮಾನತೆ ಹೋಗಲಾಡಿಸಲು ಸಂವಿಧಾನದ ಆಶಯ ಅನುಷ್ಠಾನವಾಗಬೇಕು. ಅದಕ್ಕಾಗಿ ಧ್ವನಿ ಇಲ್ಲದವರ ಪರ ದ್ವನಿ ಎತ್ತುವುದು, ವಸ್ತುನಿಷ್ಠ ಸುದ್ದಿ ಬಿತ್ತರಿಸುವುದು ಪತ್ರಿಕಾ ವೃತ್ತಿಯ ಮೂಲಮೌಲ್ಯವಾಗಬೇಕು. ಅದು ಬಿಟ್ಟು ಕ್ಷುಲ್ಲಕ ವಿಚಾರಕ್ಕೆ ಮಹತ್ವ ಕೊಡುವುದು, ಮೌಢ್ಯ ಹಾಗೂ ಕಂದಾಚಾರವನ್ನು ಬೆಳೆಸುವ ಕೆಲಸವನ್ನು ಪತ್ರಕರ್ತರು ಮಾಡಬಾರದು ಎಂದರು.