ದಾವಣಗೆರೆ: ಶನಿವಾರ ದಾವಣಗೆರೆಯಲ್ಲಿ ನಡೆದ ಜೆ.ಪಿ.ನಡ್ಡಾ (J.P.Nadda) ರೋಡ್ ಶೋನಲ್ಲಿ ವ್ಯಕ್ತಿಯೋರ್ವರು ತಮ್ಮ ಚಹರೆ ಮೂಲಕ ಎಲ್ಲರ ಗಮನಸೆಳೆದಿದ್ದರು. ಒಂದು ಕ್ಷಣ ಜನರೆಲ್ಲಾ ಮೋದಿ ಮೋದಿ ಎಂದು ಜೈಕಾರ ಹಾಕಲು ಆರಂಭಿಸಿದರು. ಆದರೆ ಅದು ನಿಜಾವಾದ ಮೋದಿಯಾಗಿರಲಿಲ್ಲ. ನೋಡಲು ಮೋದಿಯ ಪ್ರತಿರೂಪವಾಗಿದ್ದ ಆ ವ್ಯಕ್ತಿಯನ್ನು ಜೂನಿಯರ್ ಮೋದಿ (Junior Modi) ಎಂದೇ ಕರೆಯಲಾಗುತ್ತದೆ. ಇವರನ್ನು ನೋಡಿದ ಜನ ಮೋದಿ ಎಂದು ಕೈಕುಲುಕಿದ್ದಲ್ಲದೆ ಸೆಲ್ಫಿಗಾಗಿ ಇವರ ಹಿಂದೆ ಮುಗಿಬಿದ್ದಿದ್ದರು.
ಮೋದಿಯ ಪಡಿಯಚ್ಚಿನಂತೆ ಕಾಣುವ ಈ ವ್ಯಕ್ತಿಯ ಹೆಸರು ಸದಾನಂದ ನಾಯಕ್. ಇವರು ಉಡುಪಿ ಸಮೀಪದ ಹಿರಿಯಡ್ಕ ನಿವಾಸಿ. ಇವರು ಬಿಜೆಪಿಯ ಕಟ್ಟರ್ ಅಭಿಮಾನಿಯಾಗಿದ್ದು, ಮೋದಿಯ ತದ್ರೂಪದಿಂದಾಗಿ ಬಿಜೆಪಿಯಲ್ಲಿ (BJP) ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಶನಿವಾರ ದಾವಣಗೆರೆಯಲ್ಲಿ (Davangere) ನಡೆದ ಜೆ.ಪಿ.ನಡ್ಡಾ ರೋಡ್ ಶೋಗೂ ಮುನ್ನ ಜೂನಿಯರ್ ಮೋದಿಯವರು ರೋಡ್ ಶೋ ನಡೆಸಿ ಎಲ್ಲಡೆ ಹವಾ ಸೃಷ್ಟಿಸುವ ಮೂಲಕ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಎಲ್ಲರ ಗಮನಸೆಳೆದಿದ್ದಾರೆ.
ಜೂನಿಯರ್ ಮೋದಿ ಎಂದೇ ಖ್ಯಾತವಾಗಿರುವ ಸದಾನಂದ ನಾಯಕ್ (Sadananda Nayak) ವೃತ್ತಿಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದಾರೆ. ಹಿಂದೆ ಒಂದು ಸಲ ಇವರು ಹರಿದ್ವಾರಕ್ಕೆ ಪ್ರವಾಸ ಹೋಗಿದ್ದರು. ಪ್ರವಾಸದಲ್ಲಿ ಇದ್ದ ಕಾರಣ ಗಡ್ಡ ತೆಗೆದಿರಲಿಲ್ಲ. ಗಡ್ಡ ಬಿಟ್ಟಿದ್ದ ಇವರನ್ನು ನೋಡಿದ ಉತ್ತರ ಭಾರತದ ಜನ ಮೋದಿ ಎಂದುಕೊಂಡು ಇವರ ಹಿಂದೆ ಮುಗಿಬಿದ್ದರಂತೆ. ಅಂದೇ ತನ್ನ ಮುಖದಲ್ಲಿ ನರೇಂದ್ರ ಮೋದಿಯವರ ಛಾಯೆಯಿದೆ ಎಂದು ಅವರಿಗೆ ಅರಿವಾಗಿದ್ದು. ಅಂದಿನಿಂದ ಇವರ ಬೇಡಿಕೆ ಹೆಚ್ಚಾಗಿದ್ದು, ಒಂದು ದಿನ ವಿರಾಮವಿಲ್ಲದಂತೆ ಬಿಜೆಪಿ ಪರವಾಗಿ ಸಂಚಾರ ಮಾಡುತ್ತಿದ್ದಾರೆ. ಇವರ ಹಾವಭಾವಗಳು ಸಹ ಮೋದಿಯಂತೆ ಇರುವುದರಿಂದ ಜನರನ್ನು ಮೋಡಿಮಾಡುತ್ತಿದ್ದಾರೆ.