ದೇವರ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ವೇಳೆ ನಟ ಜೂನಿಯರ್ ಎನ್ ಟಿ ಆರ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿನಿಮಾದ ಕೆಲವು ಫೈಟ್ ದೃಶ್ಯಗಳ ಶೂಟಿಂಗ್ ವೇಳೆ ಜೂನಿಯರ್ ಎನ್ ಟಿ ಆರ್ ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಸಲಾಗಿದೆ ಎಂಬ ಸುದ್ದಿ ಎರಡು ದಿನದ ಹಿಂದೆಯೇ ಹರಿದಾಡಲು ಆರಂಭಿಸಿತ್ತು. ಇದೀಗ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿದೆ.
ದೇವರ ಚಿತ್ರತಂಡದವರು ನೀಡಿರುವ ಮಾಹಿತಿಯಂತೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಜೂ ಎನ್ಟಿಆರ್ ಗಾಯಗೊಂಡಿದ್ದಾರೆಯೇ ವಿನಃ ಸಿನಿಮಾದ ಶೂಟಿಂಗ್ನಲ್ಲಿ ಅಲ್ಲ. ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಜೂನಿಯರ್ ಎನ್ ಟಿ ಆರ್ ಅವರ ಮಣಿಕಟ್ಟು ಹಾಗೂ ಹೆಬ್ಬೆರಳಿಗೆ ಗಾಯಗಳಾಗಿದೆ. ಬಳಿಕ ಸೂಕ್ತ ಚಿಕಿತ್ಸೆ ಪಡೆದುಕೊಂಡು ನೋವಿನ ನಡುವೆಯೂ ‘ದೇವರ’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಲ್ಲದೆ ಸಿನಿಮಾದ ಮೊದಲ ಭಾಗದ ಚಿತ್ರೀಕರಣವನ್ನೂ ಸಹ ಮುಗಿಸಿಕೊಟ್ಟಿದ್ದಾರೆ ಎಂದಿದ್ದಾರೆ.
ಇನ್ನೂ ದೇವರ ಸಿನಿಮಾದ ಶೂಟಿಂಗ್ ಬಗ್ಗೆ ಟ್ವೀಟ್ ಮಾಡಿದ್ದ ಜೂ ಎನ್ಟಿಆರ್ ‘ದೇವರ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಮುಗಿಸಿದ್ದೇವೆ. ನಾನು ಈ ತಂಡದ ಸಮುದ್ರದಂಥಹಾ ಪ್ರೀತಿ ಮತ್ತು ಕಾಳಜಿಯನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಕೊರಟಾಲ ಶಿವ ಸೃಷ್ಟಿಸಿರುವ ಅದ್ಭುತ ಪ್ರಪಂಚದಲ್ಲಿ ಯಾನ ಮಾಡಲು ನಾನಂತೂ ಕಾಯುತ್ತಿದ್ದೇನೆ. ಈ ಕಾಯುವಿಕೆ ಸೆಪ್ಟೆಂಬರ್ 27ಕ್ಕೆ ಅಂತ್ಯವಾಗಲಿದೆ’ ಎಂದಿದ್ದಾರೆ. ಸಂದೇಶದ ಜೊತೆಗೆ ತಮ್ಮ ಹಾಗೂ ಕೊರಟಾಲ ಶಿವ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ.
‘ದೇವರ’ ಚಿತ್ರತಂಡ ಹೇಳಿರುವಂತೆ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಮುಗಿದಿದ್ದು, ಎರಡನೇ ಭಾಗದ ಚಿತ್ರೀಕರಣವನ್ನು ಸಹ ಈಗಲೇ ಪ್ರಾರಂಭ ಮಾಡುವ ಯೋಜನೆ ಇದೆಯಂತೆ. ಆದರೆ ಎರಡನೇ ಭಾಗದ ಕೆಲವು ಭಾಗಗಳಷ್ಟೆ ಈಗ ಚಿತ್ರೀಕರಣ ಆಗಲಿವೆಯಂತೆ. ಜೂ ಎನ್ಟಿಆರ್ ಪ್ರಸ್ತುತ ಹಿಂದಿಯ ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆಗೆ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಶುರು ಮಾಡಲಿದ್ದಾರೆ. ‘ವಾರ್ 2’ ಸಿನಿಮಾದ ಚಿತ್ರೀಕರಣವೂ ಬಹುತೇಕ ಅಂತ್ಯವಾಗುತ್ತಾ ಬಂದಿದೆ. ಈ ಎಲ್ಲಾ ಸಿನಿಮಾಗಳು ಕಂಪ್ಲೀಟ್ ಆದ ಬಳಿಕ ದೇವರ ಸಿನಿಮಾದ ಎರಡನೇ ಭಾಗದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.