ಚಿತ್ರದುರ್ಗ, ಜು.02- ನೀರಾವರಿ ಇಲಾಖೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಖಂಡಿಸಿ ರೈತನೊಬ್ಬ ಉಪವಾಸ ಸತ್ಯಾಗ್ರಹ ಮಾಡಿದ ಘಟನೆ ನಡೆದಿದೆ. ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ನೀರಾವರಿ ಇಲಾಖೆ ಕಚೇರಿ ಬಳಿ ರೈತ ಪ್ರತಿಭಟನೆ ನಡೆಸಿದ್ದಾನೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕೆರೆ ಹಾಗೂ ಚೆಕ್ ಡ್ಯಾಮ್ ಗಳಲ್ಲಿ ಕಳಪೆ ಕಾಮಗಾರಿ ಆಗಿದ್ದು,
ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರೈತ ರೇವಣ್ಣ ಎಂಬುವವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಶಾಸಕರು ಕೆರೆ ಮತ್ತು ಚೆಕ್ ಡ್ಯಾಂ ಗಳ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ಇಲಾಖೆಯ AEE ಮತ್ತು JE ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕೆಂದು ಆಗ್ರಹ ಮಾಡಿದ್ದಾನೆ.
ಇನ್ನೂ ಹೊಳಲ್ಕೆರೆ ತಾಲೂಕಿನ ರಾಮಗಿರಿ ಹೋಬಳಿ, ತಾಳಿಕಟ್ಟೆ ಮತ್ತು ಟಿ.ವಡೇರಹಳ್ಳಿ
ಗ್ರಾಮದ ಮ್ಯಾಸನ ಕಟ್ಟೆ ಅಭಿವೃದ್ಧಿ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿಯ ಅಳತೆ ಪುಸ್ತಕ ಬರೆದು ಹಣ ಪಾವತಿ ಪಡೆಯುವ ಉದ್ದೇಶದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇದರಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಹೊಳಲ್ಕೆರೆ ತಾಲೂಕಿನ ಎಲ್ಲಾ ಗ್ರಾಮಗಳ ಕೆರೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು,
ಎಸ್ಟಿಮೇಟ್ ನಲ್ಲಿ ಅಳವಡಿಸಿದ ಸಾಮಗ್ರಿಗಳು ಗ್ರಾನೆಟ್, ಕಲ್ಲು,ಕಾಡುಗಲ್ಲು, ಗ್ರಾವಲ್, ಸಿಮೆಂಟ್ ಜೆಲ್ಲಿಕಲ್ಲು ಕಬ್ಬಿಣ ಕಳಪೆಯಾಗಿದ್ದು, ಇಲಾಖೆಯಿಂದ ಎಲ್ಲಾ ಸಾಮಗ್ರಿಗಳ ಗುಣಮಟ್ಟ ಪರೀಕ್ಷೆ ಮಾಡಿ, ತನಿಖೆ ಮಾಡಬೇಕು, ಹೊಳಲ್ಕೆರೆ ತಾಲೂಕಿನಾದ್ಯಂತ ಕಾಮಗಾರಿಗಳಿಗೆ ನಿಗದಿಪಡಿಸಿದ ಹಣಕ್ಕೆ ತಕ್ಕ ಕೆಲಸ ಆಗಿರುವ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಸತ್ಯಾಗ್ರಹದ ಮೂಲಕ ಮನವಿ ಮಾಡಿದ್ದಾನೆ.