ನಮ್ಮ ಸಂಪ್ರದಾಯದಲ್ಲಿ, ವಾರದ ಪ್ರತಿ ದಿನವನ್ನ ಒಂದೆಲ್ಲಾ ಒಂದು ದೇವರಿಗೆ ಎಂದು ಮೀಸಲಿಡಲಾಗಿದೆ. ಆ ವಾರದ ಪ್ರಕಾರ, ಆ ದಿನ ಪ್ರಾರ್ಥನೆ ಮತ್ತು ಪೂಜೆ ಮಾಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಬುಧನು ದುರ್ಬಲ ಸ್ಥಾನದಲ್ಲಿದ್ದರೆ, ಬುಧವಾರ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು ಎನ್ನಲಾಗುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಕೂಡ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕೆಲವು ವಿಶೇಷ ಸಲಹೆಗಳನ್ನು ಸೂಚಿಸಲಾಗಿದೆ, ಇದನ್ನು ನೀವು ಕೂಡ ಪ್ರಯತ್ನಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ದುರ್ವೆ
ಗಣೇಶನಿಗೆ ದುರ್ವೆ ಎಂದರೆ ತುಂಬಾ ಪ್ರಿಯ ಎಂದು ನಂಬಲಾಗಿದೆ. ಹಾಗಾಗಿ ಬುಧವಾರ ಗಣೇಶನಿಗೆ ಪೂಜೆ ಮಾಡುವಾಗ ದುರ್ವೆಯನ್ನು ತಪ್ಪದೇ ಅರ್ಪಿಸಬೇಕು. ಅಥವಾ ಮನೆಯ ಬಳಿ ಗಣಪತಿ ದೇವಸ್ಥಾನ ಇರುವವರು, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಗಣೇಶನ ಪಾದದ ಬಳಿ 11 ಅಥವಾ 21 ದುರ್ವೆ ಇಟ್ಟು ಭಕ್ತಿಯಿಂದ ಮನಸ್ಸಿನಲ್ಲಿರುವ ಆಸೆಗಳನ್ನು ಬೇಡಿಕೊಳ್ಳಿ. ಬಳಿಕ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತದೆ. ನೀವು ಬುಧವಾರ ಗಣೇಶನನ್ನು ಪೂಜಿಸಲು ದೇವಾಲಯಕ್ಕೆ ಹೋದಾಗ, ಹಸಿರು ಬಟ್ಟೆಗಳನ್ನು ಧರಿಸಿ. ಏಕೆಂದರೆ ಹಸಿರು ಬಣ್ಣ ಗಣೇಶನಿಗೆ ತುಂಬಾ ಪ್ರಿಯವೆಂದು ಪರಿಗಣಿಸಲಾಗುತ್ತದೆ.
ಹೆಸರು ಕಾಳು
ಗಣೇಶನ ಆಶೀರ್ವಾದ ಪಡೆಯಲು ಮತ್ತು ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಲು, ಹೆಸರು ಬೇಳೆಯನ್ನು ಅಕ್ಕಿಯೊಂದಿಗೆ ಬೆರೆಸಿ ದಾನ ಮಾಡಬೇಕು. ಈ ಹೆಸರು ಬೇಳೆಯನ್ನು ನೀವು ಅಡಿಗೆಯಲ್ಲಿ ಬಳಸಿಯೂ ಸೇವಿಸಬಹುದು. ಬುಧವಾರ ಹೆಸರು ಕಾಳನ್ನು ಮೊಳಕೆಯೊಡೆಸಿ ಪಕ್ಷಿಗಳಿಗೆ ತಿನ್ನಲು ಕೊಡುವ ಮೂಲಕ, ಗಣೇಶನ ಆಶೀರ್ವಾದವನ್ನು ಸಹ ಪಡೆಯಬಹುದು. ಜೊತೆಗೆ ಈ ದಿನ ಬಡವರಿಗೆ ಹೆಸರು ಕಾಳು ದಾನ ಮಾಡುವ ಮೂಲಕ ಅಥವಾ ಬುಧವಾರ ದೇವಾಲಯಕ್ಕೆ ಹೋಗುವ ಮೂಲಕ, ಜಾತಕದಲ್ಲಿ ಬುಧ ಗ್ರಹದಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಬುಧ ದೋಷ
ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿದ್ದರೆ, ಪಿತೃ ದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಇದನ್ನು ತಡೆಯಲು ಪ್ರತಿದಿನ ಮನೆಯಲ್ಲಿ ಗಣೇಶನನ್ನು ಪೂಜೆ ಮಾಡಿ. ಹೀಗೆ ಮಾಡುವುದರಿಂದ ಜಾತಕ ದೋಷ ನಿವಾರಣೆಯಾಗುತ್ತದೆ. ಜೊತೆಗೆ ಮನೆಯಲ್ಲಿ ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆಗಳಿದ್ದಲ್ಲಿ ಪರಿಹಾರವಾಗುತ್ತದೆ. ಹಾಗಾಗಿ ಗಣೇಶನ ಮೂರ್ತಿ ಅಥವಾ ಫೋಟೋ ಇಟ್ಟು ಪ್ರತಿದಿನ ಭಕ್ತಿಯಿಂದ ಪೂಜೆ ಮಾಡಿ.