ಭಾರತ ಮತ್ತು ಕೆನಡಾ ನಡುವಿನ ಬಾಂಧವ್ಯ ಹದಗೆಡಲು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೇರ ಹೊಣೆ ಎಂದು ಭಾರತ ವಿದೇಶಾಂಗ ಸಚಿವಾಲಯ ಹೇಳಿದೆ.
ಖಾಲಿಸ್ತಾನಿ ಪ್ರತ್ರ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಬಂಧ ಬುಧವಾರ ತನಿಖಾ ಆಯೋಗದ ಮುಂದೆ ಹಾಜರಾದ ಟ್ರುಡೊ, ‘ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ್ಗಳ ಪಾತ್ರವಿದೆ ಎಂದು ಆರೋಪಿಸಿದಾಗ ನನ್ನಲ್ಲಿ ಯಾವುದೇ ಬಲವಾದ ಪುರಾವೆಗಳಿರಲಿಲ್ಲ, ಗುಪ್ತಚರ ಮಾಹಿತಿ ಮಾತ್ರ ಇತ್ತು’ ಎಂದು ಒಪ್ಪಿಕೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ‘ನಾವು ಈವರೆಗೂ ಹೇಳಿಕೊಂಡು ಬಂದಿದ್ದೇ ಇಂದು ನಿಜವಾಗಿದೆ. ಭಾರತ ಮತ್ತು ಭಾರತದ ರಾಜತಾಂತ್ರಿಕರ ವಿರುದ್ಧ ಆರೋಪ ಮಾಡುತ್ತಾ ಬಂದಿರುವ ಕೆನಡಾ, ತಾನು ಮಾಡಿರುವ ಗಂಭೀರ ಆರೋಪಗಳನ್ನು ರುಜುವಾತು ಮಾಡುವ ಯಾವುದೇ ಪುರಾವೆಗಳನ್ನು ನಮಗೆ ಪ್ರಸ್ತುತಪಡಿಸಿಲ್ಲ’ ಎಂದರು.
‘ಅಲಕ್ಷ್ಯದ ನಡವಳಿಕೆಯಿಂದ ಭಾರತ-ಕೆನಡಾ ಸಂಬಂಧದ ಮೇಲೆ ಉಂಟಾದ ಹಾನಿಯ ಸಂಪೂರ್ಣ ಹೊಣೆ ಕೆನಡಾ ಪ್ರಧಾನಿ ಟ್ರುಡೊ ಅವರ ಮೇಲಿದೆ’ ಎಂದು ಹೇಳಿದರು.