ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜಾ ನಟನೆಯ ತೆಲುಗಿನ ಆರ್ ಆರ್ ಆರ್ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಚಿತ್ರತಂಡ ಖುಷಿಯ ಅಲೆಯಲ್ಲಿ ತೇಲಾಡುತ್ತಿದೆ. ಆದರೆ ‘ಆರ್ಆರ್ಆರ್’ ಚಿತ್ರ ತಂಡದಲ್ಲಿ ಏನೋ ಬಿರುಕು ಇದೆ ಎಂಬ ಅನುಮಾನ ಮೂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಘಟನೆಗಳು ನಡೆಯುತ್ತಿದೆ. ‘ನಾಟು ನಾಟು..’ ಗಾಯಕರಲ್ಲಿ ಒಬ್ಬರಾದ ಕಾಲ ಭೈರವ ಇದೀಗ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
‘ಆಸ್ಕರ್’ ಪ್ರಶಸ್ತಿ ಸಮಾರಂಭದಲ್ಲಿ ಭಾಗಿ ಆಗಲು ‘ಆರ್ಆರ್ಆರ್’ ತಂಡದ ಸದಸ್ಯರು ಅಮೆರಿಕಕ್ಕೆ ತೆರಳಿದ್ದರು. ಈಗ ವಾಪಸ್ ಬಂದಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಾಲ ಭೈರವ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದು, ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಆ ಟ್ವೀಟ್ನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಹೆಸರನ್ನು ಕಾಲ ಭೈರವ ಪ್ರಸ್ತಾಪಿಸಿಲ್ಲ. ಇದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.
‘ನಾಟು ನಾಟು..’ ಹಾಡಿನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹಾಡು ಜನಪ್ರಿಯ ಆಗಿರುವುದರಲ್ಲಿ ಅವರ ಕೊಡುಗೆಯನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಕಾಲ ಭೈರವ ಅವರು ತಮ್ಮ ಟ್ವೀಟ್ನಲ್ಲಿ ಈ ಸ್ಟಾರ್ ನಟರ ಹೆಸರನ್ನು ಕೈ ಬಿಟ್ಟಿರುವುದು ಅಭಿಮಾನಿಗಳಿಗೆ ಸರಿ ಎನಿಸಿಲ್ಲ. ಹಾಗಾಗಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಕೊಡುಗೆ ಏನೂ ಇಲ್ಲವೇ?’ ಎಂದು ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ. ಟ್ರೋಲ್ ಆದ ಬಳಿಕ ಕಾಲ ಭೈರವ ಅವರು ಎಚ್ಚೆತ್ತುಕೊಂಡಿದ್ದಾರೆ. ‘ಆಸ್ಕರ್ ವೇದಿಕೆಯಲ್ಲಿ ಪರ್ಫಾರ್ಮ್ ಮಾಡಲು ಸಹಾಯ ಮಾಡಿದವರ ಹೆಸರನ್ನು ಮಾತ್ರ ನಾನು ಪ್ರಸ್ತಾಪಿಸಿದ್ದೆ. ಹಾಡಿಗೆ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಕೊಡುಗೆ ಖಂಡಿತವಾಗಿಯೂ ಇದೆ. ನನ್ನ ಪೋಸ್ಟ್ಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಕ್ಷಮೆ ಕೇಳುತ್ತೇನೆ’ ಎಂದು ಕಾಲ ಭೈರವ ಟ್ವೀಟ್ ಮಾಡಿ ಕ್ಷಮೆ ಯಾಚಿಸಿದ್ದಾರೆ.