ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ದರ್ಶನ್ ಮೇಲೆ ಗರಂ ಆಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದೆ.
ಯಾಕೆ ದೂರು ನೀಡಿದ್ದು..?
ಕಳೆದ ಎರಡು ದಿನಗಳ ಹಿಂದೆ ಕಾಟೇರ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಅದರಲ್ಲಿ ವನ್ಯ ಜೀವಿಗಳ ಬಗ್ಗೆ ಅಪಕ್ವ ಸಂಭಾಷಣೆ ಇದೆ ಅನ್ನೋದು ಆರೋಪ. ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ದರೆ ಹೊಡಿಬೇಕು ಎಂಬ ಡೈಲಾಗ್ ಟ್ರೈಲರ್ನಲ್ಲಿ ಇದೆ.
ಈ ಡೈಲಾಗ್ ಅಭಿಮಾನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಅಳಿವಿನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ. ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು ಕೊಲ್ಲೋಕೆ ಪ್ರಚೋದನೆ ನೀಡಬಾರದು ಎಂದು ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ಆಗ್ರಹಿಸಿದೆ. ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೇಲ್ ಮೂಲಕ ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ದೂರು ನೀಡಿದೆ.