ತಮಿಳು ನಟ ಧನುಷ್ ಅವರ ತಂದೆ ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿ ಜೀವನಾಂಶ ಕೋರಿದ್ದ ಹಿರಿಯ ವ್ಯಕ್ತಿ ಕದಿರೇಷನ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಹಲವು ಆರೋಗ್ಯ ಸಮಸ್ಯೆಗಳಿಂದ ಅಸ್ವಸ್ಥರಾಗಿದ್ದ ಆರ್.ಕದಿರೇಶ್ನ್ (72) ಅವರನ್ನು ಇತ್ತೀಚೆಗೆ ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
2015ರಲ್ಲಿ ಧನುಷ್ ತಮ್ಮ ಮಗ ಎಂದು ಮದುರೈ ಮೂಲದ ಕದಿರೇಶನ್ ಮತ್ತು ಮೀನಾಕ್ಷಿ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಸಮಯದಲ್ಲಿ ಈ ಸಂಗತಿ ಕಾಲಿವುಡ್ನಲ್ಲಿ ಭಾರಿ ಸಂಚಲನ ಸೃಷ್ಟಿಸಿತು.ಧನುಷ್ ನಾಯಕನಾಗಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಕದಿರೇಶನ್ ಮತ್ತು ಮೀನಾಕ್ಷಿಯ ಈ ವಾದ ಚರ್ಚೆಯ ವಿಷಯವಾಗಿತ್ತು. ಮಗ ಧನುಷ್ ನಮಗೆ ಹೇಳದೆ ಶಾಲೆಯಿಂದ ಓಡಿ ಹೋಗಿದ್ದ. ಬಳಿಕ ನಿರ್ದೇಶಕ ಕಸ್ತೂರಿ ರಾಜಾ ಅವರ ಮನೆ ಸೇರಿ ದತ್ತು ಪುತ್ರನಾದ. ತಮ್ಮ ಮಗ ಈಗ ಸುಸ್ಥಿತಿಯಲ್ಲಿದ್ದಾನೆ. ನಮಗೆ ತಿಂಗಳಿಗೆ ಜೀವನಾಂಶ ಕೊಡಿಸಿ ಎಂದು ಕದಿರೇಶನ್ ಮತ್ತು ಮೀನಾಕ್ಷ ದಂಪತಿ ಆಗ್ರಹಿಸಿದ್ದರು.
ಆದರೆ, ಸಂಪೂರ್ಣ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣವನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಇದೇ ಕೊರಗಿನಲ್ಲಿದ್ದ ಕದಿರೇಶನ್, ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ. ಇತ್ತೀಚೆಗೆ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗುತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.