ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನೆಚ್ಚಿನ ನಟನ ಜನ್ಮದಿನವನ್ನು ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ದಾಸನ ಹುಟ್ಟುಹಬ್ಬದ ಪ್ರಯುಕ್ತ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ.
ಡೆವಿಲ್ ಚಿತ್ರದ ಟೀಸರ್ ಫಸ್ಟ್ ಲುಕ್ ಹೊಸ ರೀತಿಯಲ್ಲಿ ಮೂಡಿ ಬಂದಿದ್ದು, ಹಿಂದೆಂದೂ ನೋಡಿರದ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಡೆವಿಲ್ ಚಿತ್ರತಂಡ ಭರ್ಜರಿಯಾದ ಉಡುಗೊರೆಯನ್ನೇ ನೀಡಿದೆ.
‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವ? ಡೆವಿಲ್’ ಎಂದು ಹೇಳಿ ದರ್ಶನ್ ಅವರು ಜೋರಾಗಿ ನಗುತ್ತಾರೆ. ಈ ಟೀಸರ್ ಗಮನ ಸೆಳೆದಿದೆ. ದರ್ಶನ್ ಹಾವ-ಭಾವ ಇಷ್ಟ ಆಗಿದ್ದು, ಅವರ ಲುಕ್ ಕೂಡ ಬೇರೆಯದೇ ರೀತಿಯಲ್ಲಿ ಮೂಡಿ ಬಂದಿದೆ.
ಇನ್ನೂ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರು ಕಾಮನ್ ಡಿಪಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ಹಿಂದೆಯೇ ದರ್ಶನ್ ಹುಟ್ಟುಹಬ್ಬದಂದು ಹೂವು-ಹಣ್ಣು ಹಾರ ತರದಂತೆ ಅಭಿಮಾನಿಗಳೀಗೆ ಮನವಿ ಮಾಡಿದ್ದರು. ಅದರಂತೆ ಫ್ಯಾನ್ಸ್ ಹೂವು ಹಣ್ಣು ಹಾರ ತರುವುದನ್ನು ಬಿಟ್ಟು ದಾಸನ ಹೆಸರಿನಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಡಿಬಾಸ್ ಹುಟ್ಟುಹಬ್ಬಕ್ಕಾಗಿ ಪ್ರತಿ ವರ್ಷ ಅಪಾರ ಅಭಿಮಾನಿಗಳು ಅವರ ಮನೆಯ ಬಳಿ ಬರುತ್ತಾರೆ. ಅಂತೆಯೇ ಈ ವರ್ಷವು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಕೋರಲು ರಾಜ್ಯದ ವಿವಿಧೆಡೆಯಿಂದ ಮಧ್ಯರಾತ್ರಿಯೇ ಅಭಿಮಾನಿಗಳು ದರ್ಶನ್ ಮನೆ ಮುಂದೆ ಆಗಮಿಸಿದ್ದಾರೆ. ಹಾಗಾಗಿ ಆರ್ಆರ್ ನಗರ ದರ್ಶನ ನಿವಾಸದ ಬಳಿ ಸಾಕಷ್ಟು ಪೊಲೀಸ್ ಬಂದೂಬಸ್ತ್ ನಿಯೋಜಿಸಲಾಗಿದೆ.
ಮಧ್ಯರಾತ್ರಿ 12 ಗಂಟೆಯಿಂದಲೇ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಕಷ್ಟು ಜೋರಾಗಿಯೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇದೇ ವೇಳೆ ದರ್ಶನರ ನಟನೆಯ ಬಹುನೀರಿಕ್ಷಿತ ಚಿತ್ರ ‘ಡೆವಿಲ್’ ಫಸ್ಟ್ ಲುಕ್ ರಿವೀಲ್ ಆಗಿದೆ.
ಹುಟ್ಟು ಹಬ್ಬದ ಜೊತೆಗೆ ದರ್ಶನ್ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು 25 ವರ್ಷಗಳಾಗಿವೆ. ಇದೇ ಶುಭ ಸಂದರ್ಭದಲ್ಲಿ ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾದ ಸಮಾರಂಭವೊಂದನ್ನು ಏರ್ಪಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಬೇಬಿ ಮಠ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.
ಫೆಬ್ರವರಿ 17ರ ಶನಿವಾರ ಸಂಜೆ 5 ಗಂಟೆಗೆ ಬೆಳ್ಳಿ ಪರ್ವ ಡಿ-25 ಎಂಬ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದ್ದು, ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ.