ಕಲಘಟಗಿ: ಸಚಿವ ಸಂತೋಷ ಲಾಡ್ ಅವರಿಗೆ ರಾಜಕೀಯದಲ್ಲಿ ಮರುಜನ್ಮ ನೀಡಿದ ಕಲಘಟಗಿ ಮತಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಆರೋಪಿಸಿದ್ದಾರೆ. ತಾಲೂಕಾನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾಳಾಗಿ ರೈತರು ಬೀದಿಪಾಲಾಗಿದ್ದಾರೆ
ಬ್ಯಾಂಕ್ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿಯಿಂದ ರೈತರ ಕುಟುಂಬಗಳು ತತ್ತರಿಸಿ ಹೋಗಿವೆ. ಅಷ್ಟೆ ಅಲ್ಲದೆ ಕಲಘಟಗಿ ತಾಲ್ಲೂಕಿನಾದ್ಯಂತ ಮಳೆಯ ಅವಾಂತರಕ್ಕೆ ಎಷ್ಟೋ ಮನೆಗಳು ಬಿದ್ದು ಬಡಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಇಷ್ಟೆಲ್ಲಾ ಆದರೂ ಇದುವರೆಗೂ ಬೆಳೆಹಾನಿಯ ಜಮೀನುಗಳಿಗೆ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರನ್ನು ಒಂದು ಬಾರಿಯು ಭೇಟಿ ನೀಡದೆ ಕೇವಲ ಹುಬ್ಬಳ್ಳಿ ಧಾರವಾಡ ನಗರಗಳಿಗೆ ಮಾತ್ರ ಸಚಿವರು ಮೀಸಲಾಗಿರುವುದು ಕಲಘಟಗಿ ಮತಕ್ಷೇತ್ರದ ದೌರ್ಭಾಗ್ಯ ಎಂದರು. ನಿನ್ನೆ ಬುಧವಾರ ಕಲಘಟಗಿ ಪಟ್ಟಣದಲ್ಲಿ ತಾಲ್ಲೂಕಿನ ಎಲ್ಲ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.