ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಬೆನ್ನಲ್ಲೇ ಪ್ರಭಾಸ್ ‘ಕಲ್ಕಿ 2898 ಎಡಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.
‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ನಿರ್ದೇಶಕರು ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಸಿನಿಮಾದಲ್ಲಿ ಆರು ಸಾವಿರ ವರ್ಷಗಳ ಕಥೆ ಇರಲಿದೆಯಂತೆ. ಈ ವಿಚಾರ ಕೇಳಿ ಪ್ರಭಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ದೆಹಲಿ ಸಮೀಪದ ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಾಗ್ ಅಶ್ವಿನ್ ಭಾಗವಹಿಸಿದ್ದಾರೆ. ಈ ವೇಳೆ ಅವರು ಸಿನಿಮಾ ಟೈಮ್ಲೈನ್ ಬಗ್ಗೆ ಮಾತನಾಡಿದ್ದಾರೆ. ‘ಮಹಾಭಾರತದಿಂದ ಆರಂಭ ಆಗುವ ಸಿನಿಮಾದ ಕಥೆ 2898 ಎಡಿಯಲ್ಲಿ ಕೊನೆಗೊಳ್ಳಲಿದೆ. ಸುಮಾರು ಆರು ಸಾವಿರ ವರ್ಷಗಳ ಕಥೆ ಸಿನಿಮಾದಲ್ಲಿದೆ. ನಾವು ಜಗತ್ತುಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದೇವೆ’ ಎಂದಿದ್ದಾರೆ ಅವರು. ಮಹಾಭಾರತದಲ್ಲಿ ಕೃಷ್ಣ ಇದ್ದಾನೆ. ಅವನಿಂದಲೇ ಕಥೆ ಆರಂಭ ಆಗಲಿದೆಯಂತೆ.
‘ನಾವು ಸಾಕಷ್ಟು ಸೆಟ್ಗಳನ್ನು ಹಾಕಬೇಕಿತ್ತು. ಹೊಸ ರೀತಿಯ ವಾಹನಗಳನ್ನು ಸಿದ್ಧಪಡಿಸಬೇಕಿತ್ತು. ಇವುಗಳ ನಿರ್ಮಾಣಕ್ಕೆ ಸಾಕಷ್ಟು ಸಮಯ ಹಿಡಿಯಿತು’ ಎಂದು ಹೇಳಿದ್ದಾರೆ ನಾಗ್ ಅಶ್ವಿನ್. ಪ್ರಭಾಸ್ ಅಭಿಮಾನಿಗಳು ಈ ಸಿನಿಮಾ ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ. ಈ ಸಿನಿಮಾ ಮೇ 9ರಂದು ರಿಲೀಸ್ ಆಗಲಿದ್ದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.