ಸಾಕಷ್ಟು ವಿವಾದದ ಮೂಲಕ ತೆರೆಕಂಡ ದಿ ಕೇರಳ ಸ್ಟೋರಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹಾಗೂ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ. ಈ ಮಧ್ಯೆ ಸಿನಿಮಾ ವೀಕ್ಷಿಸಿದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೆಣ್ಣು ಹೆತ್ತ ಪೋಷಕರಿಗೆ ಈ ಸಿನಿಮಾ ನೋಡುವಂತೆ ಸಲಹೆ ನೀಡಿದ್ದಾರೆ.
ಈ ಸಿನಿಮಾವನ್ನು ಪ್ರತಿಯೊಬ್ಬ ಹಿಂದೂ ಹೆಣ್ಣು ಮಗಳು ಕುಟುಂಬದ ಜೊತೆಗೆ ನೋಡಬೇಕು. ಅವರ ಅತೀ ಮತೀಯವಾದ ಮತ್ತು ನಮ್ಮ ಮಕ್ಕಳಿಗೆ ಧರ್ಮದ ತಿಳುವಳಿಕೆ ಇಲ್ಲದಿರೋದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ರೀತಿಯ ಅನ್ಯಾಯವನ್ನು ಜಗತ್ತು ಒಪ್ಪಬಾರದು. ಹೆಣ್ಣು ಮಗಳ ಮೇಲೆ ಅನ್ಯಾಯ ಆದಾಗ ಸಮಾಜ ಸುಮ್ಮನೆ ಕೂರಬಾರದು. ಕಾಂಗ್ರೆಸ್, ಕಮ್ಯುನಿಸ್ಟ್, ಜನತಾದಳ ಈ ಅನ್ಯಾಯಕ್ಕೆ ಪ್ರೇರಣೆ ನೀಡುತ್ತಾರೆ ಎಂದು ಈ ವೇಳೆ ಡಾ.ಕಲ್ಲಡ್ಕ ಪ್ರಭಾಕರ್ ಆಕ್ರೋಶ ಹೊರ ಹಾಕಿದರು.
ಕೇರಳದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳ ಮತಾಂತರ ಆಗಿದೆ. ಮತಾಂತರ ಆದ ಬಳಿಕ ಕ್ರೂರ ರೀತಿಯಲ್ಲಿ ಅತ್ಯಾಚಾರ ಮಾಡಲಾಗಿದೆ. ಈ ಚಿತ್ರ ನೋಡಿ ಹೆಣ್ಣು ಮಕ್ಕಳು ಯೋಚನೆ ಮಾಡಬೇಕು. ತಂದೆ-ತಾಯಿ ಮಕ್ಕಳನ್ನು ಎಚ್ಚರಿಕೆಯಿಂದ ನೋಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು. ಪೋಷಕರು ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಕಳುಹಿಸೋವಾಗ ಎಚ್ಚರಿಕೆಯಿಂದ ಇರಬೇಕು. ಮತಾಂತರ ನಿಷೇಧ ಕಾಯಿದೆಯನ್ನು ಬಿಜೆಪಿ ತಂದಿದೆ. ಲವ್ ಜಿಹಾದ್ನಲ್ಲಿ ಏನಾಗುತ್ತದೆ ಎಂಬುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೆಣ್ಣು ಮಕ್ಕಳು ನಮಗೆ ದೇವಿ -ತಾಯಿಯ ರೀತಿ ಎಂದಿರುವ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಯೊಬ್ಬ ಪೋಷಕರು ಸಿನಿಮಾ ನೋಡಿ ಎಂದಿದ್ದಾರೆ.
ನಟಿ ಆದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಯೋಗಿತಾ, ಸಿದ್ಧಿ, ಸೋನಿಯಾ ಕನ್ನಡದ ನಟ ವಿಜಯ್ ಕೃಷ್ಣ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಮೇ 5ರಂದು ತೆರೆಕಂಡ ಸಿನಿಮಾ 2 ದಿನಗಳಲ್ಲಿ 20ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿದೆ.