ಧಾರವಾಡ: ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಗೆ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ ಎಂಬುವವರು ನಕಲಿ ಬಿ.ಇಡಿ ಅಂಕಪಟ್ಟಿ ನೀಡಿ ಪ್ರಾಂಶುಪಾಲ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಸಂಬಂಧ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
ವಾರ್ಡನ್ ಹುದ್ದೆಯಲ್ಲಿದ್ದ ಡಾ.ಯಲ್ಲಪ್ಪಗೌಡ ಕಲ್ಲನಗೌಡರ, ಉತ್ತರ ಪ್ರದೇಶದ ಬಿ.ಇಡಿ ಅಂಕಪಟ್ಟಿಯನ್ನು ನಕಲಿ ಮಾಡಿಸಿದ್ದ. 2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟನ್ಸ್ ಎಜ್ಯುಕೇಶನ್ ಕೇಂದ್ರದ ಅಂಕಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದ. 2006ರ ವರೆಗೂ ವಾರ್ಡನ್ ಆಗಿದ್ದ ಕಲ್ಲನಗೌಡರ, ನಕಲಿ ಅಂಕಪಟ್ಟಿಯನ್ನು ಧಾರವಾಡ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಿ, ಅಲ್ಲಿಂದ ಪ್ರಾಂಶುಪಾಲ ಹುದ್ದೆಗೇರಿದ್ದಾನೆ.
ಉತ್ತರ ಪ್ರದೇಶ ರಾಜ್ಯದ ಅಂಕಪಟ್ಟಿಗೆ ಮಾನ್ಯತೆ ಇಲ್ಲದಿದ್ದರೂ ಅದನ್ನು ಕೊಟ್ಟು ಇಲಾಖೆಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿದ್ದಾನೆ. 2007-08ರ ಸಾಲಿನಲ್ಲಿ ಕರ್ತವ್ಯದಲ್ಲಿದ್ದರೂ ಮತ್ತೊಮ್ಮೆ ರೆಗ್ಯುಲರ್ ಬಿ.ಇಡಿ ಪದವಿ ಪಡೆದ ಕಲ್ಲನಗೌಡರ, ಇದನ್ನೂ ಸಹ ಕಾನೂನು ಬಾಹಿರವಾಗಿಯೇ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಹುಬ್ಬಳ್ಳಿಯ ಆಲ್ ಮಿಜಾನ್ ಎಜ್ಯುಕೇಶನ್ ಅಸೋಸಿಯೇಶನ್ ಕಾಲೇಜಿನಲ್ಲಿ ಕಲ್ಲನಗೌಡರ ಕಾನೂನು ಬಾಹಿರವಾಗಿ ಬಿ.ಇಡಿ ಪದವಿ ಪಡೆದಿದ್ದಾರೆ. ಕರ್ತವ್ಯದಲ್ಲಿದ್ದುಕೊಂಡೇ ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿದ ಆರೋಪದಡಿ ಇದೀಗ ಕಲ್ಲನಗೌಡರ ಮೇಲೆ ಸಿದಪ್ಪ ಅಕ್ಕಿ ಎನ್ನುವವರು ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.