ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿರುವ ನಟಿ ಪ್ರಚಾರದಲ್ಲ ಫುಲ್ ಬ್ಯುಸಿಯಾಗಿದ್ದಾರೆ. ಮತದಾರರನ್ನು ಸೆಳೆಯಲು ನಟಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮಂಡಿ ಕ್ಷೇತ್ರದ ಭರ್ಮೌರ್ ಗೆ ಭೇಟಿ ನೀಡಿರುವ ಕಂಗನಾ, ಅಲ್ಲಿನ ಪುರಾತನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಚಂಬಾ ಗಡ್ಡಿ ಸಮುದಾಯದ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಮತಯಾಚನೆ ಮಾಡಿದ್ದಾರೆ.
ಇನ್ನೂ ಚುನಾವಣಾ ಪ್ರಚಾರದ ನಡುವೆ ಕಂಗನಾ ರಣಾವತ್ ಮಂಡಿಯಲ್ಲಿ ಮಾಜಿ ಸಿಎಂ ಜೈರಾಮ್ ಠಾಕೂರ್ ಅವರೊಂದಿಗೆ ನೆಲದ ಮೇಲೆ ಕುಳಿತು ಆಹಾರ ಸೇವಿಸಿದರು. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ವಿರೋಧ ಪಕ್ಷದ ನಾಯಕಿ ಮತ್ತು ಕಂಗನಾ ರಣಾವತ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೈರಾಮ್ ಠಾಕೂರ್ ಐದು ವರ್ಷಗಳ ಕಾಲ ಧುಮಾಲ್ ಅವರನ್ನು ನೆನಪಿಸಿಕೊಳ್ಳಲಿಲ್ಲ. ಇವರು ತಮ್ಮ ಹಿತಾಸಕ್ತಿಗಾಗಿ ಸಮೀರಪುರದ ಸುತ್ತ ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಿದೆ. ಹಿಮಾಚಲ ಪ್ರದೇಶದಿಂದ ಮೊದಲ ಬಾರಿಗೆ ಸಿನಿಮಾ ಲೋಕದ ನಟಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗಿರುವಾಗ ಈ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ಮಹಿಳೆಯರಲ್ಲಿ ಕಂಗನಾ ಕ್ರೇಜ್ ಉತ್ತುಂಗದಲ್ಲಿದೆ. ಗ್ರಾಮೀಣ ಮಹಿಳೆಯರು ಕಂಗನಾ ಜೊತೆ ಫೋಟೋ ತೆಗೆಯಲು ಉತ್ಸುಕರಾಗಿದ್ದಾರೆ. ಕಂಗನಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರಲ್ಲಿ ಪೈಪೋಟಿ ಏರ್ಪಟ್ಟಿದೆ.
ತಮ್ಮ ಹೇಳಿಕೆಗಳ ಮೂಲಕ ಸದಾ ವಿವಾದಕ್ಕೆ ಸಿಲುಕಿಕೊಳ್ಳುವ ಕಂಗನಾ, ರಾಜಕೀಯ ಕ್ಷೇತ್ರದಲ್ಲೂ ಅದನ್ನು ಮುಂದುವರೆಸಿಸಿದ್ದಾರೆ. ಅವರ ಆಹಾರದ ವಿಚಾರ ಈ ರಾಜಕೀಯ ವಲಯದಲ್ಲಿ ಭಾರೀ ಸುದ್ದಿಯಾಗಿದೆ. ಕಂಗನಾ ರಣಾವತ್ ಅವರಿಗೆ ಗೋಮಾಂಸ ಅಂದರೆ ಇಷ್ಟ. ಅವರೇ ಅದನ್ನು ಹೇಳಿಕೊಂಡಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್. ಈ ಮಾತು ಪರ ವಿರೋಧಕ್ಕೆ ಕಾರಣವಾಗಿತ್ತು. ಕಂಗನಾ ಮೇಲೆಯೂ ಹಲವರು ಮುಗಿಬಿದ್ದಿದ್ದರು.