ತಮಿಳು ಚಿತ್ರರಂಗದ ಸ್ಟಾರ್ ಹೀರೋ ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋತಿದೆ. ಸಿನಿಮಾಗೆ ಹಾಕಿದ ಬಂಡವಾಳ ಬಂದರೆ ಸಾಕಪ್ಪ ಎಂದು ನಿರ್ಮಾಪಕರು ಅಂದುಕೊಳ್ತಿದ್ದಾರೆ. ‘ಕಂಗುವ’ ಸಿನಿಮಾದ ಸೋಲು ಸೂರ್ಯ ಅವರ ಮುಂದಿನ ಚಿತ್ರಗಳ ಮೇಲೆ ಪರಿಣಾಮ ಬೀರಿದೆ. ಅವರಿಗೆ ನೀಡಲಾದ ಬಿಗ್ ಬಜೆಟ್ ಚಿತ್ರವನ್ನು ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ.
ಬರೋಬ್ಬರಿ 350 ಕೋಟಿ ವೆಚ್ಚದಲ್ಲಿ ಬಾಲಿವುಡ್ನಲ್ಲಿ ‘ಕರ್ಣ’ ಹೆಸರಿನ ಸಿನಿಮಾ ಪ್ಲ್ಯಾನ್ ಮಾಡಲಾಗಿತ್ತು. ಇದರಲ್ಲಿ ಸೂರ್ಯ ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಇದು ಮಹಾಭಾರತದ ಕರ್ಣ ಅವರನ್ನು ಆಧರಿಸಿ ಸಿದ್ಧಗೊಳ್ಳಬೇಕಿದ್ದ ಸಿನಿಮಾ ಆಗಿತ್ತು. ‘ಭಾಗ್ ಮಿಲ್ಕಾ ಭಾಗ್’ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಈ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ಈ ಸಿನಿಮಾ ಎರಡು ಪಾರ್ಟ್ನಲ್ಲಿ ಬರಬೇಕಿತ್ತು. ಈ ಚಿತ್ರದಲ್ಲಿ ಜಾನ್ವಿ ಅವರು ದ್ರೌಪದಿ ಪಾತ್ರ ಮಾಡಬೇಕಿತ್ತು.
ಸೂರ್ಯ ಅವರ ‘ಕಂಗುವ’ ಸಿನಿಮಾ ನೋಡಿದ ಬಳಿಕ ‘ಕರ್ಣ’ ನಿರ್ಮಾಪಕರು ಈ ಸಿನಿಮಾ ಮಾಡಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಈ ಚಿತ್ರವನ್ನು ಮಾಡದೆ ಇರಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಶಾಹಿದ್ ಕಪೂರ್ ಜೊತೆ ‘ಅಶ್ವತ್ಥಾಮ’ ಸಿನಿಮಾ ಆಗಬೇಕಿತ್ತು. ಆದರೆ, ಈ ಚಿತ್ರವೂ ಸೆಟ್ಟೇರಿಲ್ಲ. ಈ ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ದಾಟಿತ್ತು. ಇದನ್ನು ‘ಕರ್ಣ’ ನಿರ್ಮಾಪಕರು ಗಮನಿಸಿದ್ದು ಇದೀಗ ಕರ್ಣ ಸಿನಿಮಾ ಮಾಡದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.