ಸಹದೇವ್ ಕೆಲವಡಿ ನಿರ್ದೇಶನದ, ರೂಪಾ ರಾವ್ ನಿರ್ಮಾಣದ ಕೆಂಡ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಹೊತ್ತಿನಲ್ಲಿ ಚಿತ್ರತಂಡ ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ಕೆಂಡ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.
ದೆಹಲಿಯಲ್ಲಿ ನಡೆಯಲಿರುವ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್-24ಕ್ಕೆ ಕೆಂಡ ಸಿನಿಮಾ ಪ್ರವೇಶ ಪಡೆದಿದೆ. ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲದೇ, ಕನ್ನಡ ಚಿತ್ರರಂಗದ ಪಾಲಿಗೂ ಖುಷಿಯ ಸಂಗತಿ. ಈ ಫಿಲಂ ಫೆಸ್ಟಿವಲ್ ಪ್ರತಿಷ್ಠೆಯನ್ನು ಕಾಯ್ದುಕೊಂಡು ಬಂದಿದೆ. ಇದಕ್ಕೆ ಆಯ್ಕೆಯಾಗಬೇಕೆಂದು ಅದೆಷ್ಟೋ ಸಿನಿಮಾ ಮಂದಿಯ ಕನಸಾಗಿರುತ್ತದೆ. ಹಾಗಂತ, ಅದೇನೂ ಸಲೀಸಿನ ಸಂಗತಿಯಲ್ಲ. ಅಲ್ಲಿ ನಾನಾ ಪರೀಕ್ಷೆಗಳಿಗೆ ಎದುರಾಗಿ ಜೈ ಎನಿಸಿಕೊಂಡರೆ ಮಾತ್ರವೇ ಸಿನಿಮಾವೊಂದು ಆಯ್ಕೆಯಾಗಲು ಸಾಧ್ಯ. ಎಲ್ಲ ರೀತಿಯಿಂದಲೂ ಗುಣಮಟ್ಟ ಕಾಯ್ದುಕೊಂಡ ಸಿನಿಮಾಗಳಿಗೆ ಮಾತ್ರವೇ ಆ ಅವಕಾಶ ಸಿಗುತ್ತದೆ.
ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಸಹದೇವ್ ಕೆಲವಡಿ ಮೊದಲ ಚಿತ್ರದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಈ ಚಿತ್ರ ಇದೇ ಜೂನ್ ತಿಂಗಳಿನಲ್ಲಿ ತೆರೆಕಾಣಲಿದೆ.