ಬೆಂಗಳೂರು: ವಿಫಲತೆ ಹಾಗೂ ಸಫಲತೆ ಇವೆರಡೂ ಜೀವನದ ಅವಿಭಾಜ್ಯ ಅಂಗ. ಮನುಷ್ಯನ ವಿಫಲತೆಗಳೇ ಗೆಲುವಿನ ಮೆಟ್ಟಿಲಾಗುವುದು. ವಿಭಿನ್ನ ಚಿಂತನೆ ಮತ್ತು ಸದೃಡ ಮನೋಕಾಮನೆ ಜೊತೆ ನಿರಂತರ ಪ್ರಯತ್ನ ಇದ್ದರೆ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಹೇಳಿದರು.
ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ೨೦೨೧-೨೨ ಹಾಗೂ ೨೦೨೨-೨೩ನೆಯ ಸಾಲಿನ ʻಕನ್ನಡ ಪ್ರವೇಶ, ಕಾವ, ಜಾಣ, ರತ್ನ ಹಾಗೂ ಶಾಸನಶಾಸ್ತ್ರ ಡಿಪ್ಲೋಮಾʼ ಉತ್ತಮ ಸಾಧನೆ ಮಾಡಿದವರಿಗೆ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಪಿಎಚ್ಡಿ ಪದವಿ ಪಡೆದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲಿ ಇದ್ದೇ ಇರುತ್ತದೆ. ವಾಸ್ತವದಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಪ್ರಯತ್ನ ಎನ್ನುವ ಒರೆಗೆ ಹಚ್ಚುವ ಮೂಲಕ ಜಗತ್ತಿಗೆ ತೋರಿಸ ಬೇಕಾಗಿದೆ,
ಚಿನ್ನ ಭೂಗರ್ಭದಲ್ಲಿ ಇದ್ದರೆ, ಮುತ್ತು ಸಮುದ್ರದ ಆಳದಲ್ಲಿ ಇದ್ದರೆ ಯಾವ ಪ್ರಯೋಜನವೂ ಇಲ್ಲ. ಅದನ್ನು ಹುಡುಕಿ ಜಗತ್ತಿಗೆ ತೋರಿಸುವ ಕೆಲಸ ಆಗಬೇಕಿದೆ. ಅಂದಾಗ ಮಾತ್ರ ಜಗತ್ತಿಗೆ ಚಿನ್ನ ಹಾಗೂ ಮುತ್ತಿನ ಮಹತ್ವ ಅರ್ಥವಾಗುವುದು. ಮನುಷ್ಯನಿಗೆ ಸಾಧನೆ ಮಾಡಬೇಕು ಎನ್ನುವ ಛಲ ಇದ್ದರೆ ಸಾಧಕ ಎಂದು ಗುರುತಿಸಿಕೊಳ್ಳುತ್ತಾನೆ. ನಾವೇನು ಮಾಡಲು ಸಾಧ್ಯ ಎಂದು ಕೈ ಕಟ್ಟಿ ಕುಳಿತರೆ ಯಾವ ಯಾವುದೇ ಯಶಸ್ಸು ನಮ್ಮನರಸಿ ಬರುವುದಿಲ್ಲ. ಬದಲಿಗೆ ಅಂಥವರು ಏನನ್ನೂ ಸಾಧಿಸದ ನಿಷ್ಪ್ರಯೋಜಕರಾಗುವರು, ಕನ್ನಡ ಸಾಹಿತ್ಯ ಪರಿಷತ್ತಿನ ʻಕನ್ನಡ ಪ್ರವೇಶ, ಕಾವ, ಜಾಣ, ರತ್ನ ಹಾಗೂ ಶಾಸನಶಾಸ್ತ್ರ ಡಿಪ್ಲೋಮಾಗಳಿಗೆ ಉನ್ನತ ಪರಂಪರೆ ಇದೆ, ಕನ್ನಡವನ್ನು ಉಳಿಸಿ,ಬೆಳೆಸುವಲ್ಲಿ ಈ ಕೋರ್ಸ್ ಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ.
ಇಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪರಂಪರೆಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಮಾಡುತಿದೆ ಎಂದು ಹೇಳಿದ ನಾಡೋಜ ಡಾ. ಮಹೇಶ ಜೋಶಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಕೇಂದ್ರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಲವರಿಗೆ ಪಿ.ಎಚ್.ಡಿ ಪಡೆಯುವ ಮಹತ್ವದ ಅವಕಾಶವನ್ನು ಕಲ್ಪಿಸಿದೆ. ಇಲ್ಲಿ ಪಿ.ಎಚ್.ಡಿ ಪದವಿ ಪಡೆಯುವವರು ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ವಿಷಯಗಳನ್ನು ಆಯ್ಕೆ ಮಾಡಿ ಕೊಳ್ಳುವುದರಿಂದ ಕನ್ನಡ ನಾಡಿಗೆ ವಿಶಿಷ್ಟ ಕೊಡುಗೆ ಸಂದಾಯವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ತುಮಕೂರಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೆಶಾನಂದ ಸರಸ್ವತೀ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ʻಕನ್ನಡ ಪ್ರವೇಶ, ಕಾವ, ಜಾಣ, ರತ್ನ ಹಾಗೂ ಶಾಸನಶಾಸ್ತ್ರ ಡಿಪ್ಲೋಮಾʼ ಉತ್ತಮ ಸಾಧನೆ ಗೈದವರಿಗೆ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಪಿಎಚ್ಡಿ ಪದವಿ ಪಡೆದವರಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಿ ಮಾತನಾಡಿ, ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ, ಶಿಕ್ಷಕರಾದವರು ನಿರಂತರ ಕಲಿಕೆಯಲ್ಲಿ ತೊಡಗಿದ್ದರೆ ಮಾತ್ರವೇ ಕಲಿಸಲು ಸಮರ್ಥರಾಗಿರುತ್ತಾರೆ.
ಬಡತನ ಶಾಪವಲ್ಲ ಶ್ರೀಮಂತಿಕೆ ವರವೂ ಅಲ್ಲ. ಇದನ್ನು ತಿಳಿಯದಿದ್ದರೆ ಭೂಮಿಯ ಮೇಲೆ ನಾವೇ ನರಕವನ್ನು ಸೃಷ್ಟಿಸಿಕೊಳ್ಳುತ್ತೇವೆ. ಶಿಕ್ಷಕರು ನಿಮಗೆ ಏಣಿಯನ್ನು ಒದಗಿಸಬಲ್ಲರು ಆದರೆ ಅದರ ಮೇಲೆ ಏರುವ ಸಾಮರ್ಥವನ್ನು ನೀವೇ ಗಳಿಸಿಕೊಳ್ಳಬೇಕು. ಮುಖ್ಯವಾಗಿ ನಿಮ್ಮ ಮೇಲೆ ನೀವು ನಂಬಿಕೆ ಇಡಬೇಕು. ಆತ್ಮ ವಿಶ್ಲೇಷಣೆಗಿಂತ ದೊಡ್ಡ ಶಿಕ್ಷಣ ಇನ್ನೊಂದಿಲ್ಲ. ಪ್ರತಿಭೆಯನ್ನು ಯಾವುದೇ ಕಾಲಕ್ಕೂ ಜಾತಿಯಿಂದ ಅಳೆಯಬಾರದು. ಕಲಿಕೆಗೆ ಯಾವುದೇ ಕಾರಣಕ್ಕೂ ಪೂರ್ಣವಿರಾಮ ಹಾಕಬಾರದು. ಇಲ್ಲಿ ಪುರಸ್ಕೃತರಾದವರೆಲ್ಲರೂ ಪ್ರತಿಭಾವಂತರು,
ನಿಮ್ಮ ಮೇಲೆ ಈ ಪುರಸ್ಕಾರ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ನಿಮ್ಮಿಂದ ಹಲವರು ಪ್ರೇರಿತರಾಗಿ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಾ ಗಬೇಕು ಎಂದು ಕರೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೆ.ಭ ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್. ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.