ಆಸ್ಟ್ರೇಲಿಯಾ ವಿರುದ್ಧ ಚೆನ್ನೈ ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆದ್ದರೂ ಕನ್ನಡಿಗ ಕೆಎಲ್ ರಾಹುಲ್ ಮೈದಾನದಲ್ಲಿ ಬೇಸರ ವ್ಯಕ್ತಪಡಿಸಿದ್ದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ.
2023ರ ವಿಶ್ವಕಪ್ ಟೂರ್ನಿಯ ಸಲುವಾಗಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಅ.8) ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 200 ರನ್ ಗಳ ಸಾಧಾರಣ ಗುರಿ ಹಿಂಬಾಲಿಸಿದ ಟೀಮ್ ಇಂಡಿಯಾ, ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಅನ್ನು 2 ರನ್ ಗಳಾಗುವಷ್ಟರಲ್ಲಿ ಕೈಚೆಲ್ಲಿ ಆಘಾತ ಅನುಭವಿಸಿತು. 4ನೇ ವಿಕೆಟ್ ಗೆ ಜೊತೆಗೂಡಿದ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ರಣರೋಚಕ ಪ್ರದರ್ಶನ ತೋರಿ ತಂಡಕ್ಕೆ ಆಸರೆಯಾದರು.
ಆಸ್ಟ್ರೇಲಿಯಾದ ಬೌಲರ್ ಗಳ ಮೇಲೆ ಸವಾರಿ ಮಾಡಿ ಪೈಪೋಟಿಗೆ ಬಿದ್ದಂತೆ ರನ್ ಗಳಿಸಿದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ 4ನೇ ವಿಕೆಟ್ ಗೆ 165 ರನ್ ಜೊತೆಯಾಟ ನೀಡಿದ್ದರು. ತಂಡ ಗೆಲುವಿನ ಹೊಸ್ತಿಲಲ್ಲಿ ನಿಂತಿದ್ದಾಗ ವಿರಾಟ್ ಕೊಹ್ಲಿ (85 ರನ್) ವಿಕೆಟ್ ಒಪ್ಪಿಸಿದರು. ಆದರೆ ಕೊನೆಯವರೆಗೂ ಹೋರಾಟ ನಡೆಸಿದ ಕೆ.ಎಲ್.ರಾಹುಲ್ (97* ರನ್) ಹಾರ್ದಿಕ್ ಪಾಂಡ್ಯ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.
ಪಂದ್ಯದಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 115 ಎಸೆತಗಳಲ್ಲಿ 97* ರನ್ ಬಾರಿಸಿದ ರಾಹುಲ್ ಶತಕ ವಂಚಿತರಾಗಿದ್ದರು. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಎಸೆದ 42ನೇ ಓವರ್ ನಲ್ಲಿ ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ ಶತಕ ಸಿಡಿಸುವ ಯೋಜನೆಯನ್ನು ರಾಹುಲ್ ರೂಪಿಸಿಕೊಂಡಿದ್ದರು. ಆದರೆ ಕಮಿನ್ಸ್ ಎಸೆದ 2ನೇ ಎಸೆತವನ್ನು ರಾಹುಲ್ ಎಕ್ಸ್ಟ್ರಾ ಕವರ್ಸ್ ಕಡೆ ಆಡಿದ ಚೆಂಡು ಬೌಂಡರಿ ಗೆರೆ ದಾಟಿತ್ತು. ಇದರಿಂದ ಬೇಸರಗೊಂಡ ರಾಹುಲ್ ಹತಾಶಭಾವದಿಂದ ಮೈದಾನದಲ್ಲಿ ಕುಳಿತುಕೊಂಡರು.
ಪಂದ್ಯ ಗೆಲ್ಲಲು ತಂಡಕ್ಕೆ 5 ರನ್ ಅವಶ್ಯಕತೆ ಇದ್ದಾಗ ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ ಶತಕ ಪೂರ್ಣಗೊಳಿಸಬೇಕೆಂದು ಯೋಚಿಸಿದ್ದೆ, ಆದರೆ ಅದು ಕೈಗೂಡದ ಕಾರಣ ಬೇಸರ ಉಂಟಾಯಿತು ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಕೆ.ಎಲ್.ರಾಹುಲ್ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯಲ್ಲಿ ತಿಳಿಸಿದ್ದಾರೆ.