ಬಾಲಿವುಡ್ ಬ್ಯೂಟಿ ನಟಿ ಶಿಲ್ಪಾ ಶೆಟ್ಟಿ 17 ವರ್ಷಗಳ ಬಳಿಕ ಕನ್ನಡ ಸಿನಿಮಾಗೆ ಕಂಬ್ಯಾಕ್ ಮಾಡಿದ್ದಾರೆ. ಧೃವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ `ಕೆಡಿ’ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸುತ್ತಿದ್ದು ಈಗಾಗಲೇ ಶಿಲ್ಪಾ ಶೆಟ್ಟಿ ಲುಕ್ ರಿವೀಲ್ ಆಗಿದೆ. ನಟಿಯ ಲುಕ್ಗೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಕನ್ನಡ ಚಿತ್ರವನ್ನ ತೆಲುಗಿನಲ್ಲಿ ಶುಭಾಶಯ ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಶಿಲ್ಪಾ ಶೆಟ್ಟಿ ಗುರಿಯಾಗಿದ್ದಾರೆ.
ಯುಗಾದಿ ಹಬ್ಬದಂದು `ಕೆಡಿ’ ಚಿತ್ರದ ಶಿಲ್ಪಾ ಶೆಟ್ಟಿ ಪಾತ್ರದ ಸತ್ಯವತಿ ಲುಕ್ನ ರಿವೀಲ್ ಮಾಡಲಾಗಿತ್ತು. ತೊಂಬತ್ತರ ದಶಕದ ಸೀರೆ, ಹೇರ್ಸ್ಟೈಲ್, ಕನ್ನಡಕ ಹಾಗೂ ಕೈಯಲ್ಲೊಂದು ಬ್ಯಾಗ್ ಹಿಡಿದು ನಡೆದು ವಿಂಟೇಜ್ ಕಾರೊಂದರ ಮುಂದೆ ಶಿಲ್ಪಾ ಶೆಟ್ಟಿ ನಡೆದು ಬರುತ್ತಿರುವ ಪೋಸ್ಟರ್ ಇದಾಗಿದ್ದು, ಪೋಸ್ಟರ್ ಅನ್ನು ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಪೋಸ್ಟರ್ ಜೊತೆಗೆ ಶಿಲ್ಪಾ ಶೆಟ್ಟಿ ಬರೆದಿರುವ ಸಾಲುಗಳು ಕನ್ನಡಿಗರ ಕೋಪಕ್ಕೆ ಕಾರಣವಾಗಿವೆ. ಶಿಲ್ಪಾ ಶೆಟ್ಟಿ `ಯುಗಾದಿ ಶುಭಾಕಾಂಕ್ಷಲು’ ಎಂದು ತೆಲುಗಿನಲ್ಲಿ ಶುಭ ಕೋರಿದ್ದಾರೆ. ಈ ಪೋಸ್ಟ್ನಲ್ಲಿ ಎಲ್ಲಿಯೂ ಸಹ ಕನ್ನಡವಿಲ್ಲ. ಕನ್ನಡ ಚಿತ್ರದ ಪೋಸ್ಟರ್ ಹಂಚಿಕೊಳ್ಳುವಾಗ, ಕನ್ನಡ ಚಿತ್ರರಂಗಕ್ಕೆ ಹಲವು ವರ್ಷಗಳ ಬಳಿಕ ಮರಳಿ ಬರುತ್ತಿರುವ ವಿಷಯವನ್ನು ಯುಗಾದಿ ಹಬ್ಬದ ವಿಶೇಷ ದಿನದಂದು ತಿಳಿಸುವಾಗ ಕನ್ನಡದ ಬದಲು ತೆಲುಗು ಬಳಸಿದ್ದು ಯಾಕೆ ಎಂಬ ಕಾರಣಕ್ಕೆ ಕನ್ನಡಿಗರ ಕೋಪಗೊಂಡಿದ್ದಾರೆ.
ಮೂಲತಃ ಕರ್ನಾಟಕದವರೇ ಆಗಿ ಕನ್ನಡ ಕಡೆಗಣನೆ ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ. ಆದರೆ ಈ ಬಗ್ಗೆ ಶಿಲ್ಪಾ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.