ಮಂಡ್ಯ: ಈ ಬಾರಿ ಉತ್ತಮ ಮಳೆಯಾಗಿರುವ ಪರಿಣಾಮ ಈಗಾಗಲೇ ತಮಿಳುನಾಡಿಗೆ 84 ಟಿಎಂಸಿಯಷ್ಟು ನೀರು ತಲುಪಿದೆ. ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವಂತಹ ಆಶೀರ್ವಾದವನ್ನು ಕಾವೇರಿ ತಾಯಿ ನಮ್ಮ ಸರ್ಕಾರಕ್ಕೆ ಮಾಡುತ್ತಾಳೆ. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದ್ದು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಮಳೆ ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಆರ್ಎಸ್ ಅಣೆಕಟ್ಟೆಗೆ ಬಾಗಿನ ಸಮರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜುಲೈ ತಿಂಗಳಿನಲ್ಲಿ ಪ್ರತಿ ದಿನ 1 ಟಿಎಂಸಿಯಂತೆ ತಮಿಳುನಾಡಿಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಅದಕ್ಕಿಂತ ಹೆಚ್ಚಿನ ನೀರು ಹರಿದು ತಾಯಿ ಕಾವೇರಿ ನೆಮ್ಮದಿ ಶಾಂತಿ ತಂದಿದ್ದಾಳೆ” ಎಂದು ಹೇಳಿದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯೋಜನವಿದೆ. ಸಂಕಷ್ಟ ಕಾಲದಲ್ಲಿ ಅವರ ಪಾಲಿನ 177 ಟಿಎಂಸಿ ನೀರನ್ನು ಅವರಿಗೆ ಹರಿಸಬಹುದು. ಸುಮಾರು 400 ಮೆ.ವ್ಯಾ ವಿದ್ಯುತ್ ತಯಾರಿಸಬಹುದು. ಈ ಅಣೆಕಟ್ಟು ಕಟ್ಟಲು ನ್ಯಾಯಾಲಯ ಅನುವು ಮಾಡಿಕೊಡುತ್ತದೆ ಎಂದು ನಂಬಿದ್ದೇವೆ. ತಮಿಳುನಾಡಿನ ಜನತೆಗೆ ಭಗವಂತನ ಕೃಪೆಯಿಂದ ಜ್ಞಾನೋದಯವಾಗುತ್ತದೆ. ನಮ್ಮ ಕಾಲದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಾರೆ ಎಂದು ನಂಬಿದ್ದೇವೆ ಎಂದರು.
ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ತಮಿಳುನಾಡಿನವರು ಈ ನದಿಯ ಮೂಲಕ ಅನ್ನ ಬೆಳೆಯುತ್ತಿದ್ದೇವೆ. ಎಲ್ಲರ ಪಾಲಿನ ಜೀವನದಿ ಕಾವೇರಿಗೆ 92 ವರ್ಷ ಕಳೆದರೂ ನಮನ ಸಲ್ಲಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿಯಲ್ಲಿ ಈ ವರ್ಷ ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡಿದ್ದೆವು. ನಮ್ಮ ಬದುಕು ಉಳಿಸು ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದೆವು, ಮನುಷ್ಯ ಪ್ರಯತ್ನಕ್ಕೆ ಸೋಲಾಗಬಹುದು ಆದರೆ ಪ್ರಾರ್ಥನೆಗೆ ಎಂದೂ ಸೋಲಾಗುವುದಿಲ್ಲ ಎನ್ನುವುದಕ್ಕೆ ಕಾವೇರಿ ತಾಯಿ ತುಂಬಿ ಹರಿಯುತ್ತಿರುವುದೇ ಸಾಕ್ಷಿ. ಸ್ವರ್ಣಗೌರಿ ಹಬ್ಬದ ದಿನ ಮನೆಯ ಹೆಣ್ಣುಮಕ್ಕಳಿಗೆ ಬಾಗಿನ ಅರ್ಪಿಸಿದಂತೆ ಶುಭಗಳಿಗೆಯ ಅಭಿಜಿನ್ ಲಗ್ನದಲ್ಲಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಾಗಿದೆ ಎಂದರು.
ಮೇಲಿರುವ ಮೋಡಕ್ಕೆ ಕೆಳಗೆ ಯಾವ ಸರ್ಕಾರ ಇದೆ ಎಂದು ಗೊತ್ತಿರುವುದಿಲ್ಲ?
ತಮಿಳುನಾಡಿಗೆ ನಾನು ಅಥವಾ ಸಿದ್ದರಾಮಯ್ಯ ಅವರು ನೀರು ಬಿಟ್ಟಿಲ್ಲ. ತಾಯಿ ಕೃಪೆಯಿಂದ ಹೆಚ್ಚು ಮಳೆ ಬಂದಿದೆ ಆದ ಕಾರಣ ನೀರು ಅವರಿಗೆ ಹೋಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದ ನಂತರ ಮಳೆ ಬರಲಿಲ್ಲ, ನೀರು ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಅವರಿಗೆಲ್ಲ ಈಗ ತಕ್ಕ ಉತ್ತರ ಸಿಕ್ಕಿದೆ. ಮೇಲೆ ಇರುವ ಮೋಡಕ್ಕೆ ಕೆಳಗೆ ಯಾವ ಸರ್ಕಾರ ಅಧಿಕಾರದಲ್ಲಿ ಇದೆ ಎನ್ನುವುದು ಗೊತ್ತಿರುವುದಿಲ್ಲ ಎಂದು ಹೇಳಿದರು.
ಬಾಗಿನ ಅರ್ಪಣೆಗೂ ಮುಂಚಿತವಾಗಿ ಕೆಆರ್ ಎಸ್ ಅಣೆಕಟ್ಟಿನ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅತಿಥಿಗೃಹದ ಬಳಿ ಉತ್ತರಿಸಿದ ಡಿಸಿಎಂ ಅವರು, ಪ್ರಸ್ತುತ ಮಳೆ ಕಡಿಮೆಯಾಗಿದೆ. ಕಾವೇರಿ ನದಿ ತೀರದ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ತಮಿಳುನಾಡಿದ ಸಿಎಂ ಅವರ ರಾಜ್ಯಗಳ ಕೆರೆಗಳನ್ನು ತುಂಬಿಸಲು ಸೂಚನೆ ನೀಡಿದ್ದಾರೆ. ನಾವು ನಮ್ಮ ರಾಜ್ಯದ ಕೆರೆಗಳನ್ನು ತುಂಬಿಸುತ್ತಿದ್ದೇವೆ. ನಮ್ಮ ರೈತರನ್ನು ನಾವು ಕಾಪಾಡುತ್ತೇವೆ. ತಮಿಳುನಾಡಿಗೆ ಹಾಗೂ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿ. ಹೆಚ್ಚು ಕಾವೇರಿ ನೀರನ್ನು ಬಳಸಿಕೊಳ್ಳುವ ವಿಚಾರವಾಗಿ ಚರ್ಚೆ ನಡೆಸಬೇಕಾಗಿದೆ ಎಂದರು.
ಬಿಜೆಪಿ- ಜೆಡಿಎಸ್ ಪಾದಯಾತ್ರೆ ವಿಚಾರವಾಗಿ ಕೇಳಿದಾಗ, ಮೊದಲು ಭೂತಾಯಿ ಮತ್ತು ವರುಣದೇವನಿಗೆ ಪೂಜೆ ಸಲ್ಲಿಸೋಣ. ಆನಂತರ ರಾಜಕಾರಣ ಮಾತನಾಡೋಣ ಎಂದು ಹೇಳಿದರು.