ವಿಶ್ವಸಂಸ್ಥೆಯ ಮಾನವ ಮಾನವ ಹಕ್ಕುಗಳ ಮಂಡಳಿ ವಾರ್ಷಿಕ ಸಭೆಯಲ್ಲಿ ಮಾತನಾಡಲು ಈಗಾಗಲೇ ಸ್ವಿಜರ್ಲ್ಯಾಂಡ್ನ ಜಿನಿವಾಗೆ ತೆರಳಿರುವ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಆಗಲೇ ಕನ್ನಡದಲ್ಲಿ ಮಾತುಗಳನ್ನೂ ಆಡಿದ್ದಾರೆ. ಇದೀಗ ನಾಳೆ ಕಾಂತಾರ ಸಿನಿಮಾದ ಪ್ರದರ್ಶನಕ್ಕೆ ವಿಶ್ವಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್ 17 ರಂದು ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್ ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಾಗಿ ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್ ಗುಪ್ತ ತಿಳಿಸಿದ್ದಾರೆ.
ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೊಲೀಸ್ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ರಿಷಬ್ ಪರಿಸರ, ಹವಾಮಾನ ಮತ್ತು ಸಂರಕ್ಷಣೆಯ ಕುರಿತು ಹಾಗೂ ಕಾಂತಾರ ಸಿನಿಮಾದ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ನಿರ್ದೇಶಕಿ ಅನಿಂಧ್ಯಾ ಮಾಹಿತಿ ನೀಡಿದ್ದಾರೆ. ಈಗಾಗಲೇ ಮಾತನಾಡುವ ವಿಷಯದ ಮೌಖಿಕ ಸಲ್ಲಿಕೆಯನ್ನು ರಿಷಬ್ ಪೂರ್ಣಗೊಳಿಸಿದ್ದು, ಇನ್ನಷ್ಟೇ ಅವರು ಭಾಷಣವನ್ನು ಮಾಡಬೇಕಿದೆ.
ಇಂದು ಕನ್ನಡದಲ್ಲೇ ರಿಷಬ್ ಭಾಷಣ ಮಾಡಲಿದ್ದು, ನಾಳೆ ಸ್ವಿಝರ್ ಲ್ಯಾಂಡ್ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಕಾಂತಾರ ಸಿನಿಮಾದ ಪ್ರದರ್ಶನದಲ್ಲೂ ಭಾಗಿಯಾಗಲಿದ್ದಾರೆ. ಸಿನಿಮಾ ಪ್ರದರ್ಶನದ ನಂತರ ಅವರೊಂದಿಗೆ ಮಾತುಕತೆಗೂ ಕೂಡ ಸಂಸ್ಥೆಯು ಆಯೋಜನೆ ಮಾಡಿದೆ.
ರಿಷಬ್ ಆಪ್ತರು ಹೇಳುವಂತೆ ಕಾಂತಾರ ಸಿನಿಮಾವನ್ನೇ ಆಧಾರವಾಗಿಟ್ಟುಕೊಂಡು, ಕರ್ನಾಟಕ ಸಂಸ್ಕೃತಿ, ದೈವಾರಾಧನೆ, ಕಾಡಿನ ಜನರ ಬದುಕು ಹೀಗೆ ನಾಡಿ ಭವ್ಯ ಸಂಸ್ಕೃತಿಯ ಕುರಿತು ಮಾತನಾಡಲಿದ್ದಾರಂತೆ. ಜೊತೆಗೆ ಭಾರತೀಯ ಸಿನಿಮಾ ರಂಗ ಬೆಳೆದು ಬಂದ ಬಗೆಯನ್ನೂ ವಿವರಿಸಲಿದ್ದಾರಂತೆ. ವಿಶ್ವಸಂಸ್ಥೆಯ ವೇದಿಕೆಯ ಮೇಲೆ ಭಾರತೀಯ ಸಂಸ್ಕೃತಿಯ ಅನಾವರಣವನ್ನು ರಿಷಬ್ ಶೆಟ್ಟಿ ಮಾಡಲಿದ್ದಾರೆ.