ಕಪಿಲಾ ನದಿ ಪ್ರವಾಹದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರನಿಗೂ ಕಪಿಲೆಯ ದಿಗ್ಬಂಧನವಾಗಿದೆ. ಕಬಿನಿ ಹಾಗೂ ನುಗು ಜಲಾಶಯದಿಂದ ಒಟ್ಟಾರೆ 70 ಸಾವಿರ ಕ್ಯೂಸೆಕ್ ಪ್ರಮಾಣದ ನೀರನ್ನು ಹೊರಬಿಡಲಾಗಿತ್ತು. ಇದರಿಂದಾಗಿ ಮಲ್ಲನ ಮೂಲೆ ಸಮೀಪ ಮೈಸೂರು-ನಂಜನಗೂಡು ಮುಖ್ಯರಸ್ತೆಗೆ ಪ್ರವಾಹದ ನೀರು ಸಂಪೂರ್ಣ ಜಲಾವೃತವಾಗಿದ್ದು,
ಪ್ರವಾಹದ ಹೆಚ್ಚಳದಿಂದಾಗಿ ನಂಜನಗೂಡು ನಗರದ ತೋಪಿನ ಬೀದಿ, ಸರಸ್ವತಿ ಕಾಲೋನಿ ಹಾಗೂ ಹಳ್ಳದ ಕೇರಿ ಬಡಾವಣೆಯಲ್ಲಿ ಮನೆಗಳು ಜಲಾವೃತ ಗೊಂಡವು. ತಾಲ್ಲೂಕು ಆಡಳಿತದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ನೆರವಾದರು. ನಂಜನಗೂಡು ಶ್ರೀ ನಂಜುಂಡೇಶ್ವರನಿಗೂ ಕಪಿಲೆಯ ದಿಗ್ಬಂಧನ ವಾಗಿದ್ದು, ದೇವಾಲಯದ ಸಮೀಪಕ್ಕೆ ಈಗಾಗಲೇ ಸಾಕಷ್ಟು ನೀರು ಹರಿದು ಬಂದು ಜಲಾವೃತವಾಗಿದ್ದು, ಕಪಿಲಾ ನದಿಯ ಸ್ನಾನ ಘಟ್ಟಗಳು,
ಅಯ್ಯಪ್ಪ ಸ್ವಾಮಿ ದೇವಾಲಯ, ಪರಶುರಾಮ ದೇವಾಲಯ, ಹದಿನಾರು ಕಾಲು ಮಂಟಪ, ಶ್ರೀಕಂಠೇಶ್ವರ ಕಲ್ಯಾಣ ಮಂಟಪ, ಹಳ್ಳದ ಕೇರಿ, ದೇವಾಲಯದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೂ ಕೂಡ ಪ್ರವಾಹದ ನೀರು, ಹರಿದು ಬಂದು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ಕಪಿಲಾ ನದಿಯನ್ನು ವೀಕ್ಷಿಸಲು ತಾಲ್ಲೂಕಿನ ಜನರು ತಂಡೂಪತಂಡವಾಗಿ ಆಗಮಿಸಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿರುವುದು ಕಂಡು ಬಂದಿದೆ.