ಹುಬ್ಬಳ್ಳಿ : ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50 ರ ಜ್ಯೋತಿ ರಥ ಯಾತ್ರೆಗೆ ಇಂದು ಬೆಳಿಗ್ಗೆ ಸರ್ಕ್ಯೂಟ್ ಹೌಸ್ನಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತ ಹಾಗೂ ಕನ್ನಡ ಸಂಘ, ಸಂಸ್ಥೆ, ಸಾಹಿತ್ಯ ಪರಿಷತ್ತು ವತಿಯಿಂದ ವಿಜೃಂಭಣೆಯಿಂದ ಚಾಲನೆ ನೀಡಲಾಯಿತು.
ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ರಥಕ್ಕೆ ಪುಷ್ಪಾರ್ಪಣೆ ಅರ್ಪಿಸಿ, ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ, ಸಂಜೀವ ಧುಮ್ಮಕನಾಳ ಸೇರಿದಂತೆ ಅನೇಕ ಕನ್ನಡ ಅಭಿಮಾನಿಗಳು, ಕನ್ನಡ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
ಕರ್ನಾಟಕ ಸಂಭ್ರಮ-50 ಜ್ಯೋತಿ ರಥ ಯಾತ್ರೆಗೆ ಶಿವಳ್ಳಿಯ ಡೊಳ್ಳು ಕುಣಿತ, ಶೆರೇವಾಡದ ಕರಡಿ ಮಜಲು, ಸುಳ್ಳದ ಜಗ್ಗಲಿಗೆ ಮೇಳ, ಹುಬ್ಬಳ್ಳಿಯ ಗೊಂಬೆ ತಂಡ, ವಿದ್ಯಾರ್ಥಿಗಳ ಕುಣಿತ ಹಾಗೂ ಕಲಾವಿದರ ಕನ್ನಡ ಹಾಡುಗಳ ಗಾಯನ ಮೆರಗು ತಂದವು.
ಜ್ಯೋತಿ ರಥ ಯಾತ್ರೆಯು ಹುಬ್ಬಳ್ಳಿ ನಗರದ ಪ್ರಮುಖ ವೃತ್ತಗಳಾದ ಅಂಬೇಡ್ಕರ್ ವೃತ್ತ, ಚನ್ನಮ್ಮ ವೃತ್ತ, ಸಿದ್ಧಾರೂಢ ಮಠ ಸೇರಿದಂತೆ ನಗರದ ಬೀದಿಗಳಲ್ಲಿ ಸಂಚರಿಸಿ, ನಂತರ ಕುಂದಗೋಳ ತಾಲೂಕು ಪ್ರವೇಶ ಮಾಡಲಿದೆ.
ಹಳೇ ಹುಬ್ಬಳ್ಳಿಯ ಸ್ವರ್ಣ ಮಯೂರಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ಗೀತೆಗೆ ಆಕರ್ಷಕ ನೃತ್ಯವನ್ನು ಪ್ರದರ್ಶಿಸಿ ನೋಡುಗರ ಕಣ್ಮನ ಸೆಳೆದರು.