ಮೊಳಕಾಲ್ಮೂರು, ಆ. 27- ಮಾದಿಗ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಂದು ಬೆಳಗ್ಗೆ ಮೊಳಕಾಲ್ಮೂರು ಪಟ್ಟಣದ ಖಾಸಗಿ ನಿಲ್ದಾಣದಲ್ಲಿ ನೂರಾರು ಕಾರ್ಯಕರ್ತರು ತಮಟೆ ಭಾರಿಸುವ ಮೂಲಕ, ಪ್ರತಿಭಟನೆ ನಡೆಸಲಾಯಿತು.
ಇದೆ ವೇಳೆ ದಲಿತ ಮುಖಂಡರು ಹಾಗೂ ನಿಕಟಪೂರ್ವ ಜಿಲ್ಲಾ ಸಂಚಾಲಕರಾದ, ಜಿ ಶ್ರೀನಿವಾಸ್ ಮೂರ್ತಿ ಮಾತನಾಡಿ,
ರಾಜ್ಯದಲ್ಲಿ ಮಾದಿಗ ಸಮುದಾಯ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸುಪ್ರೀಂ ಕೋರ್ಟ್ ನ 7 ಜನ ನ್ಯಾಯಾಧೀಶರ ತೀರ್ಮಾನಿಸಿರುವ ಒಳ ಮೀಸಲಾತಿ ಆದೇಶವನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು.ಒಳ ಮೀಸಲಾತಿ ಜಾರಿಯಾಗುವ ವರೆಗೂ, ಎಲ್ಲಾ ನೇಮಕಾತಿಗಳನ್ನು ತಡೆಹಿಡಿಯಬೇಕು. ಸರ್ಕಾರ ಗ್ಯಾರಂಟಿಗಳಿಗೆ ಬಳಸುತ್ತಿರುವ ಎಸ್ಸಿ ಎಸ್ಟಿ ವಿಶೇಷ ಹಣವನ್ನು ತಡೆ ಹಿಡಿಯಬೇಕು.ಮೊಳಕಾಲ್ಮೂರು ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಸಾರ್ವಜನಿಕ ರುದ್ರ ಭೂಮಿ ಕಲ್ಪಿಸಿಕೊಡಬೇಕು.
ತಾಲೂಕಿನಲ್ಲಿ 2 ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕಡ್ಡಾಯವಾಗಿ ಜಾಗೃತಿ ಸಮಿತಿ ಸಭೆ ನಡೆಸಬೇಕು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿಆರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಸ್ಥಾಪಿಸಬೇಕು.ಇತ್ತೀಚೆಗೆ ನಡೆದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಮನೂರಪ್ಪ ಕೊಲೆಯನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿಸಸ್ಥರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ, ತಹಶೀಲ್ದಾರ್ ಮೂಲಕ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ, ಓ.ಕರಿಬಸಪ್ಪ, ನಿಕಟ ಪೂರ್ವ ಅಧ್ಯಕ್ಷ ರಾಯಪುರ ನಾಗೇಂದ್ರಪ್ಪ,ಆರ್. ರುದ್ರಮುನಿ, ಮೊಗಲಹಳ್ಳಿ ಸಿದ್ದಾರ್ಥ್, ತಿಪ್ಪೇಸ್ವಾಮಿ, ನಾಗಸಮುದ್ರ ಮರಿಸ್ವಾಮಿ, ಬಿ ಎಂ ಸೋಮಶೇಖರ್, ಅನಿಲ್ ಕುಮಾರ್, ಭಟ್ರಹಳ್ಳಿ ಧನಂಜಯ್, ಸೇರಿದಂತೆ ಡಿಎಸ್ಎಸ್ ಕಾರ್ಯಕರ್ತರು ಭಾಗವಹಿಸಿದ್ದರು.