ನವದೆಹಲಿ: ಕರ್ನಾಟಕ ಚುನಾವಣೆಯಲ್ಲಿ (Karnataka Election) ಈ ಬಾರಿ ಬಿಜೆಪಿ (BJP) 20ಕ್ಕೂ ಹೆಚ್ಚು ಶಾಸಕರಿಗೆ ಕೊಕ್ ನೀಡಿ ಹೊಸಬರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ.
ಹೌದು. ಈಗಾಗಲೇ ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸರಣಿ ಸಭೆ ನಡೆಸುತ್ತಿದ್ದು ಇಂದು ಮಹತ್ವದ ಕೊನೆಯ ಸಭೆ ನಡೆಯಲಿದೆ.
ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಚುನಾವಣಾ ಸಮೀಕ್ಷೆಗಳು ತಿಳಿಸಿದ ಬೆನ್ನಲ್ಲೇ ಹೈಕಮಾಂಡ್ (BJP High Command) ನಾಯಕರು ಸರಣಿ ಸಭೆ ನಡೆಸಿ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡುತ್ತಿದ್ದಾರೆ. ಈ ಬಾರಿ ಎರಡು ಡಜನ್ಗೂ ಹೆಚ್ಚು ಶಾಸಕರನ್ನು ಕೈ ಬಿಡುವ ಸಾಧ್ಯತೆ ಇದ್ದು, ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪ, ಚಾರಿತ್ರ್ಯ ಕಾರಣದಿಂದ ಇಮೇಜ್ ಕಳೆದುಕೊಂಡ ನಾಯಕರಿಗೆ ಗೇಟ್ ಪಾಸ್ ನೀಡಲು ಸಭೆ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಸರ್ವೆಯಲ್ಲಿ ಸೋಲುವ ಸಾಧ್ಯತೆ ಇರುವ ನಾಯಕರಿಗೂ ಟಿಕೆಟ್ ನೀಡುವುದು ಬೇಡ. ವಯಸ್ಸಿನ ಕಾರಣ, ವರ್ಚಸ್ಸು ಕಳೆದುಕೊಂಡ ನಾಯಕರನ್ನು ಕೈ ಬಿಡಲು ಸಭೆ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಜನಾಭಿಪ್ರಾಯ ಬದಲಿಸುವ ಪ್ರಯತ್ನಕ್ಕೆ ಹೈಕಮಾಂಡ್ ಮುಂದಾಗಿದೆ.
ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ ಹಿರಿಯ ಶಾಸಕರಿಗೆ ಟಿಕೆಟ್ ನೀಡಿರಲಿಲ್ಲ. ಇದು ಆರಂಭಲ್ಲಿ ಸ್ವಲ್ಪ ಬಂಡಾಯಕ್ಕೆ ಕಾರಣವಾಗಿದ್ದರೂ ಅಂತಿಮ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬಿದ್ದಿರಲಿಲ್ಲ. ಉತ್ತರ ಪ್ರದೇಶದಲ್ಲಿ 20 ಹೊಸ ಮುಖಗಳಿಗೆ ಟಿಕೆಟ್ ನೀಡಿ ಸಕ್ಸಸ್ ಆಗಿತ್ತು. ಗುಜರಾತ್ನಲ್ಲಿ ಟಿಕೆಟ್ ಪಡೆದ 45 ಮಂದಿ ಪೈಕಿ 43 ಮಂದಿಗೆ ಗೆಲುವು ಸಿಕ್ಕಿತ್ತು.
ಉತ್ತರ ಭಾರತದಲ್ಲಿ ನಡೆಸಿದ ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ದಕ್ಷಿಣದಲ್ಲಿ ಇದು ಯಶಸ್ವಿಯಾಗುತ್ತಾ ಇಲ್ಲವೋ ಎನ್ನುವುದರ ಬಗ್ಗೆ ನಾಯಕರು ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಮರಳಿ ಅಧಿಕಾರಕ್ಕೆ ಏರಲೇಬೇಕು ಎಂದು ಬಿಜೆಪಿ ನಾಯಕರ ಪಣ ತೊಟ್ಟಿದ್ದಾರೆ.
ಕೇಂದ್ರ ಚುನಾವಣಾ ಸಮಿತಿಯ ಸಭೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನಿವಾಸದಲ್ಲಿ ಸತತ 12 ಗಂಟೆಗಳ ಕಾಲ ಹೈಕಮಾಂಡ್ ನಾಯಕರು ಸಭೆ ನಡೆಸಿದ್ದಾರೆ. ಈಗಾಗಲೇ 224 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಿ ಪಟ್ಟಿಯನ್ನು ನಾಯಕರು ಸಿದ್ದಪಡಿಸಿದ್ದಾರೆ. ಇಂದು ಪ್ರಧಾನಿ ಮೋದಿ (Narendra Modi) ಮೈಸೂರಿನಿಂದ ದೆಹಲಿಗೆ ತೆರಳಿದ ಬಳಿಕ ಸಭೆ ನಡೆಸಿ ಅಂತಿಮ ಪಟ್ಟಿ ಇಂದು ರಾತ್ರಿ ಅಥವಾ ಸೋಮವಾರ ಬಿಡುಗಡೆಯಾಗುವ ಸಾಧ್ಯತೆಯಿದೆ.